ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾದ ಕಬ್ಬಿಣದಂತಾಗಿದ್ದ ರಾಜ್ಯಕ್ಕೆ ಮಳೆ ಸುರಿದು ಭೂಮಿ ತಂಪಾಗಿದೆ. ಕೆಲವು ಕಡೆ ಮಳೆಯಿಂದಾಗಿ ಹರ್ಷ ತುಂಬಿದೆ, ಆದರೆ ಹಲವು ಕಡೆ ಮಳೆ ಅವಾಂತರ ಸೃಷ್ಟಿಯಾಗಿದೆ. ರಾಜ್ಯದಲ್ಲಿ ನಿನ್ನೆ ಸುರಿದ ಮಳೆಯಿಂದ ಏನೆಲ್ಲಾ ಆಗಿದೆ ನೋಡಿ..
ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಿದ್ದಾಪುರ ಭಾಗದಲ್ಲಿ ಮಳೆಯಾಗಿದೆ. ಶಿರಸಿಯಲ್ಲಿ ಮಳೆ ಗಾಳಿ ಆರ್ಭಟಕ್ಕೆ ಮರ, ವಿದ್ಯುತ್ ಕಂಬಗಳು ಉರುಳಿಬಿದ್ದಿವೆ. ಹೀಗಾಗಿ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಅಲ್ಲದೇ ನಗರದಾದ್ಯಂತ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.
ಚಿಕ್ಕಮಗಳೂರಿನ ಶೃಂಗೇರಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನಲ್ಲಿ ಗಾಳಿ ಸಹಿತ ಧಾರಕಾರ ಮಳೆಯಾಗಿದೆ. ಗಾಳಿ ಸಹಿತ ಸುರಿದ ಮಳೆಯಿಂದಾಗಿ ಪ್ರವಾಸಿಗರು ಹಾಗೂ ಜನಜೀವನ ಅಸ್ತವ್ಯಸ್ತವಾಗಿತ್ತು. ಚಿಕ್ಕಮಗಳೂರಿನ ಹಲವೆಡೆ ಮಳೆ ಚುರುಕುಗೊಂಡ ಹಿನ್ನೆಲೆಯಲ್ಲಿ ರೈತರು ಕೃಷಿಕರಲ್ಲಿ ಸಂತಸ ಮೂಡಿದೆ.
ಧಾರವಾಡದಲ್ಲಿ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದೆ. ಇತ್ತ ಹುಬ್ಬಳ್ಳಿಯಲ್ಲಿ ಗುಡುಗು, ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಉಡುಪಿ ನಗರದ ಭಾಗದಲ್ಲಿ ಧಾರಾಕಾರ ಮಳೆಯಾಗಿದ್ದು, ವರುಣದೇವ ತಂಪೆರೆದಿದ್ದಾನೆ. ಹವಮಾನ ಇಲಾಖೆ ಮುಂದಿನ ಕೆಲ ದಿನಗಳ ಕಾಲ ಮಳೆ ಸುರಿಯುವ ಮುನ್ನೆಚ್ಚರಿಕೆ ನೀಡಿದೆ.
ಇನ್ನು ಕಾರವಾರ, ಮುಂಡಗೋಡು, ದಾಂಡೇಲಿ, ಜೋಯಿಡಾ ಯಲ್ಲಾಪುರ ಭಾಗದಲ್ಲಿ ನಿನ್ನೆ ಮೋಡ ಕವಿದ ವಾತಾವರಣವಿತ್ತು. ಇನ್ನೂ ಮೂರು ದಿನ ಮಲೆನಾಡು, ಕರಾವಳಿಯಲ್ಲಿ ಮಳೆ ಬರುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.