ಹೊಸದಿಗಂತ ಡಿಜಿಟಲ್ ಡೆಸ್ಕ್:
ಹುಬ್ಬಳ್ಳಿಯಲ್ಲಿ ವೀರಾಪೂರ ಓಣಿಯಲ್ಲಿ ಬಡ ಕುಟುಂಬದ ಯುವತಿ ಅಂಜಲಿಯನ್ನು ಮನೆಯೊಳಗೆ ನುಗ್ಗಿ ಭೀಕರವಾಗಿ ಚಾಕು ಚುಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಇತ್ತ ಘಟನೆ ಕುರಿತು ಮಾಹಿತಿ ಸಿಕ್ಕಬೇನ್ನಲ್ಲೇ ರಜೆಯಲ್ಲಿದ್ದ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರು, ಕರ್ತವ್ಯಕ್ಕೆ ಹಾಜರಾಗಿದ್ದು, ಆರೋಪಿಯ ಪತ್ತೆಗೆ ಇಳಿದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ‘ಅಂಜಲಿ ಕೊಲೆ ಮಾಡಿದ ವಿಶ್ವ ಅಲಿಯಾಸ್ ಗಿರೀಶ್ ಪರಿಚಯಸ್ಥ. ಇಂದು ಮುಂಜಾನೆ ಅಂಜಲಿ ಅಂಬಿಗೇರಗೆ 4 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಅವರ ಮನೆಯವರ ದೂರಿನ ಪ್ರಕಾರ ಪ್ರೀತಿಸುವಂತೆ ಪೀಡಿಸುತ್ತಿದ್ದ. ಅಂಜಲಿ ಪ್ರೀತಿ ನಿರಾಕರಣೆ ಮಾಡಿದ್ದಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆರೋಪಿ ಪತ್ತೆಗಾಗಿ ಎರಡು ವಿಶೇಷ ತಂಡವನ್ನು ರಚನೆ ಮಾಡಲಾಗಿದೆ. ಜೊತೆಗೆ ಆರೋಪಿ ವಿಶ್ವ ಅಲಿಯಾಸ್ ಗಿರೀಶ್ ವಿರುದ್ಧ ಕಳ್ಳತನ ಸೇರಿದಂತೆ ಹಲವು ಪ್ರಕರಣಗಳಿವೆ. ಎಲ್ಲಾ ಆಯಾಮದಲ್ಲಿ ತನಿಖೆ ಮಾಡುತ್ತೇವೆ ಎಂದು ಹೇಳಿದರು.
ಇನ್ನು ಅಂಜಲಿ ಕುಟುಂಬ ಬೆಂಡಿಗೇರಿ ಠಾಣೆಗೆ ಬಂದಿರುವುದು ನಿಜ, ಈ ಕುರಿತು ಪೊಲೀಸ್ ಠಾಣೆಯ ಸಿಸಿಕ್ಯಾಮರಾ ದೃಶ್ಯಗಳಿವೆ. ಆದ್ರೆ, ಯಾವ ಕಾರಣಕ್ಕೆ ಬಂದಿದ್ದಾರೆ ಎನ್ನುವುದು ಸ್ಪಷ್ಟತೆ ಇಲ್ಲ. ಈ ಕುರಿತು ಸಿಬ್ಬಂದಿ ಅವರು ಬೇರೆ ಪ್ರಕರಣಕ್ಕೆ ಬಂದಿದ್ದರು ಎಂದು ಹೇಳುತ್ತಿದ್ದಾರೆ. ಈ ಬಗ್ಗೆಯೂ ತನಿಖೆ ಆರಂಭಿಸಿದ್ದೇವೆ. ಬೆಂಡಿಗೇರಿ ಠಾಣೆ ಸಿಬ್ಬಂದಿ ಲೋಪದೋಷವಿದ್ರೆ ಕ್ರಮ ಕೈಗೊಳ್ಳುತ್ತೆವೆ ಎಂದು ಹು-ಧಾ ನಗರ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಹೇಳಿದರು.