ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಟೀಸರ್ ಇದೀಗ ವಿವಾದದ ಕೇಂದ್ರಬಿಂದುವಾಗಿದೆ. ಟೀಸರ್‌ನಲ್ಲಿ ಅತಿಯಾಗಿ ವಯಸ್ಕರಿಗೆ ಸಂಬಂಧಿಸಿದ ದೃಶ್ಯಗಳಿವೆ ಎಂದು ಆರೋಪಿಸಿ, ವಕೀಲ ಲೋಹಿತ್ ಹನುಮಪ್ಪ ಅವರು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಅಧ್ಯಕ್ಷರಿಗೆ ಅಧಿಕೃತ ದೂರು ಸಲ್ಲಿಸಿದ್ದಾರೆ.
ಟೀಸರ್‌ಗಳನ್ನು ಯಾವುದೇ ಸೆನ್ಸಾರ್ ಪ್ರಮಾಣಪತ್ರ ಅಥವಾ ಸ್ಪಷ್ಟ ಮಾರ್ಗಸೂಚಿಯಿಲ್ಲದೆ ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ಅಪ್ರಾಪ್ತ ವಯಸ್ಕರು ಹಾಗೂ ಸಾರ್ವಜನಿಕ ನೈತಿಕತೆಗೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಚಲನಚಿತ್ರಗಳಿಗೆ ಇರುವಂತೆ, ಟೀಸರ್, ಟ್ರೇಲರ್ ಮತ್ತು ಪ್ರಚಾರ ವೀಡಿಯೊಗಳಿಗೂ ಸಹ ಸೆನ್ಸಾರ್ ಪ್ರಮಾಣೀಕರಣ ಕಡ್ಡಾಯವಾಗಬೇಕು ಎಂಬುದು ದೂರುದಾರರ ಒತ್ತಾಯವಾಗಿದೆ.
ಇದನ್ನೂ ಓದಿ: Kitchen tips | ಕತ್ತರಿಸಿಟ್ಟ ನಿಂಬೆ ಹಣ್ಣು ಒಣಗಿ ಹೋಗಿದೆ ಅಂತ ಬಿಸಾಡೋ ಮುಂಚೆ ಈ ಸ್ಟೋರಿ ಓದಿ
‘ಟಾಕ್ಸಿಕ್’ ಟೀಸರ್‌ನಲ್ಲಿ ತೀವ್ರ ವಯಸ್ಕ ದೃಶ್ಯಗಳು ಇದ್ದರೂ ಯಾವುದೇ ವಯೋಮಿತಿ ಸೂಚನೆ ಅಥವಾ ಮುನ್ನಚ್ಚರಿಕೆ ಇಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಗಿದೆ. ಇಂತಹ ವಿಷಯಗಳನ್ನು A ಪ್ರಮಾಣಪತ್ರದೊಂದಿಗೆ ಅಥವಾ ಸ್ಪಷ್ಟ ಎಚ್ಚರಿಕೆಯೊಂದಿಗೆ ಮಾತ್ರ ಬಿಡುಗಡೆ ಮಾಡಬೇಕು ಎಂದು ದೂರಿನಲ್ಲಿ ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ, ಟೀಸರ್ ಅನ್ನು ತಾತ್ಕಾಲಿಕವಾಗಿ ತೆಗೆದುಹಾಕಲು ಅಥವಾ ಸೂಕ್ತ ತಿದ್ದುಪಡಿ ಮಾಡಲು ನಿರ್ಮಾಪಕರಿಗೆ ನಿರ್ದೇಶನ ನೀಡಬೇಕು ಎಂದು CBFCಗೆ ಮನವಿ ಮಾಡಲಾಗಿದೆ. ಬೇಡಿಕೆಗಳನ್ನು ಪರಿಗಣಿಸದಿದ್ದರೆ, ಸೆನ್ಸಾರ್ ಮಂಡಳಿಯ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂಬ ಎಚ್ಚರಿಕೆಯನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

