ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ (Swati Maliwal) ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi) ಪ್ರತಿಕ್ರಿಯಿಸಿದ್ದು, ಮಹಿಳೆಯ ಮೇಲೆ ಯಾವುದೇ ದೌರ್ಜನ್ಯ ನಡೆದರೆ ಆಕೆಯೊಂದಿಗೆ ನಾನು ನಿಲ್ಲುವುದಾಗಿ ಹೇಳಿದ್ದಾರೆ.
ಯಾವುದೇ ಮಹಿಳೆಗೆ ಎಲ್ಲಿಯಾದರೂ ಯಾವುದೇ ದೌರ್ಜನ್ಯ ನಡೆದರೆ, ನಾವು ಮಹಿಳೆಯೊಂದಿಗೆ ನಿಲ್ಲುತ್ತೇವೆ. ನಾನು ಯಾವಾಗಲೂ ಮಹಿಳೆಯರ ಪರವಾಗಿ ನಿಲ್ಲುತ್ತೇನೆ. ಅವರು ಯಾವ ಪಕ್ಷದವರಾಗಿದ್ದರೂ ಅದು ಗಣನೆಗೆ ಬರುವುದಿಲ್ಲ. ಈ ಪ್ರಕರಣದ ಕುರಿತು ಆಪ್ ತಮ್ಮ ನಡುವೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಎಂಬುದು ಅವರಿಗೆ ಬಿಟ್ಟದ್ದು ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ರಾಜ್ಯಸಭಾ ಸದಸ್ಯೆ ಮತ್ತು ದೆಹಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸ್ವಾತಿ ಮಲಿವಾಲ್ ಮೇಲೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ ಹಲ್ಲೆ ನಡೆಸಿದ್ದರು. ಸ್ವಾತಿ ಮಲಿವಾಲ್ ಅವರು ಈ ಕುರಿತು ದೆಹಲಿಯ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ ಹೋಗಿದ್ದರು. ಕೇಜ್ರಿವಾಲ್ ಅವರ ಪಿಎ ಬಿಭವ್ ಕುಮಾರ್ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.