ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಧಿಕಾರಕ್ಕೆ ಬಂದ ನಂತರ ಇಂಡಿಯಾ ಮೈತ್ರಿಕೂಟಕ್ಕೆನಾವು ಬಾಹ್ಯ ಬೆಂಬಲ ನೀಡುವುದಾಗಿ ಘೋಷಿಸಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಾವು ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ವಿರೋಧಿ ಮೈತ್ರಿಕೂಟದ ಭಾಗವಾಗಿದ್ದು, ಮೈತ್ರಿ ಮುಂದುವರಿಸುವುದಾಗಿ ಗುರುವಾರ ಹೇಳಿದ್ದಾರೆ.
ಕೆಲವರು ನಿನ್ನೆಯ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಅಖಿಲ ಭಾರತ ಮಟ್ಟದಲ್ಲಿ ನಾನು ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದೇನೆ. ಇಂಡಿಯಾ ಮೈತ್ರಿಕೂಟ ನನ್ನ ಮೆದುಳಿನ ಕೂಸು. ನಾವು ರಾಷ್ಟ್ರ ಮಟ್ಟದಲ್ಲಿ ಒಟ್ಟಿಗೆ ಇದ್ದೇವೆ ಮತ್ತು ಒಟ್ಟಿಗೆ ಇರುತ್ತೇವೆ ಎಂದು ಹೇಳಿದ್ದಾರೆ.
ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಪಶ್ಚಿಮ ಬಂಗಾಳದ ಸಿಪಿಐ(ಎಂ) ಮತ್ತು ಕಾಂಗ್ರೆಸ್ ಘಟಕಗಳು ಕೈಜೋಡಿಸಿ ರಾಜ್ಯದಲ್ಲಿ ಬಿಜೆಪಿಗೆ ಸಹಾಯ ಮಾಡಿವೆ ಎಂದು ಬ್ಯಾನರ್ಜಿ ಆರೋಪಿಸಿದ್ದಾರೆ.
ಬಂಗಾಳದಲ್ಲಿ ಸಿಪಿಐ(ಎಂ) ಮತ್ತು ಕಾಂಗ್ರೆಸ್ ಅನ್ನು ಲೆಕ್ಕಿಸಬೇಡಿ. ಅವರು ನಮ್ಮೊಂದಿಗಿಲ್ಲ, ಅವರು ಇಲ್ಲಿ ಬಿಜೆಪಿಯೊಂದಿಗೆ ಇದ್ದಾರೆ. ನಾನು ದೆಹಲಿಯಲ್ಲಿ ಅದರ(ಇಂಡಿಯಾ ಬ್ಲಾಕ್) ಬಗ್ಗೆ ಮಾತನಾಡುತ್ತಿದ್ದೇನೆ ಎಂದು ದೀದಿ ಹೇಳಿದರು.
ಬ್ಯಾನರ್ಜಿ ಅವಕಾಶವಾದಿ ರಾಜಕಾರಣಿ
ಇನ್ನು ಮಮತಾ ಬ್ಯಾನರ್ಜಿ ಈ ಘೋಷಣೆಗೆ ಪ್ರತಿಕ್ರಿಯಿಸಿದ ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರು, ಮಮತಾ ಬ್ಯಾನರ್ಜಿ ಈಗ ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾ ಬಣವನ್ನು ಒಪ್ಪಿಕೊಳ್ಳುತ್ತಿದ್ದಾರೆ ಮತ್ತು ಅದರ ಬೆಳವಣಿಗೆಯ ವೇಗವನ್ನು ಗುರುತಿಸುತ್ತಿದ್ದಾರೆ. ಅವರು ರಾಷ್ಟ್ರ ರಾಜಕೀಯದಲ್ಲಿ ತಮ್ಮ ಪ್ರಸ್ತುತತೆಯನ್ನು ಕಾಪಾಡಿಕೊಳ್ಳುವ ಗುರಿ ಹೊಂದಿದ್ದಾರೆ ಎಂದು ಟೀಕಿಸಿದರು.
ಮಮತಾ ಬ್ಯಾನರ್ಜಿ ಅವರನ್ನು “ಅವಕಾಶವಾದಿ ರಾಜಕಾರಣಿ” ಎಂದು ಕರೆದ ಚೌಧರಿ, ಅವರು ಬದಲಾಗುತ್ತಿರುವ ರಾಜಕೀಯ ಸನ್ನಿವೇಶವನ್ನು ಅರಿತುಕೊಂಡ ತಮ್ಮ ನಿಲುವನ್ನು ಬದಲಾಯಿಸಿದ್ದಾರೆ ಎಂದರು.