ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಟೀಕೆ ಮಾಡಿದ್ದಕ್ಕಾಗಿ ಮಾಜಿ ಹೈಕೋರ್ಟ್ ನ್ಯಾಯಮೂರ್ತಿ ಮತ್ತು ಬಿಜೆಪಿ ಅಭ್ಯರ್ಥಿ ಅಭಿಜಿತ್ ಗಂಗೋಪಾಧ್ಯಾಯ ಅವರಿಗೆ ಚುನಾವಣಾ ಆಯೋಗ ಶೋಕಾಸ್ ನೊಟೀಸ್ ನೀಡಿದೆ.
ಪಶ್ಚಿಮ ಬಂಗಾಳದ ತಮ್ಲುಕ್ ಕ್ಷೇತ್ರದಿಂದ ಸ್ಪರ್ಧಿಸಿರುವ ಅಭಿಜಿತ್ ಗಂಗೋಪಾಧ್ಯಾಯ ಅವರು ಹಲ್ದಿಯಾದಲ್ಲಿ ಚುನಾವಣಾ ಸಭೆಯೊಂದರಲ್ಲಿ ಮಮತಾ ಬ್ಯಾನರ್ಜಿ ಬಗ್ಗೆ ಲೈಂಗಿಕ ಟೀಕೆಗಳನ್ನು ಮಾಡಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಸಲ್ಲಿಸಿದ ದೂರಿನಲ್ಲಿ ತಿಳಿಸಲಾಗಿದೆ.
ತೃಣಮೂಲ ಕಾಂಗ್ರೆಸ್ ಗಂಗೋಪಾಧ್ಯಾಯ ವಿರುದ್ಧ ದೂರು ದಾಖಲಿಸಿದ ನಂತರ ಚುನಾವಣಾ ಆಯೋಗದ ಕ್ರಮ ಅನುಸರಿಸಿದ್ದು, ಅವರು ನೀಡುತ್ತಿರುವ ಅವಹೇಳನಕಾರಿ ಹೇಳಿಕೆ ಅವರ ಅಸಭ್ಯ ನಡವಳಿಕೆ ಮತ್ತು ಸ್ತ್ರೀದ್ವೇಷದ ಮನಸ್ಥಿತಿಯ ಸ್ಪಷ್ಟ ಚಿತ್ರಣವಾಗಿದೆ ಎಂದು ಹೇಳಿದೆ.
ಅಭಿಜಿತ್ ಗಂಗೋಪಾಧ್ಯಾಯ ಪಮಮತಾ ಬ್ಯಾನರ್ಜಿ ಅವರಿಗೆ, ನಿಮ್ಮನ್ನು ಎಷ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ? ನಿಮ್ಮ ಬೆಲೆ 10 ಲಕ್ಷವೇ? ಏಕೆಂದರೆ ನೀವು ಕೀಯಾ ಸೇಠ್ ಮೂಲಕ ನಿಮ್ಮ ಮೇಕಪ್ ಮಾಡಿಸಿಕೊಳ್ಳುತ್ತಿದ್ದೀರಾ? ಮಮತಾ ಬ್ಯಾನರ್ಜಿ ನಿಜವಾಗಿಯೂ ಮಹಿಳೆಯೇ? ಎಂದು ನನಗೆ ಕೆಲವೊಮ್ಮೆ ಆಶ್ಚರ್ಯವಾಗುತ್ತಿದೆ ಎಂದು ಹೇಳಿದ್ದರು.
ಅಭಿಜಿತ್ ಗಂಗೋಪಾಧ್ಯಾಯ ಅವರ ಅಸಭ್ಯ ಹೇಳಿಕೆಗಳು ಸಭ್ಯತೆ ಮತ್ತು ನೈತಿಕತೆಯ ಆಧಾರವನ್ನು ಸಂಪೂರ್ಣವಾಗಿ ಮೀರಿದೆ. ಅವರು ಕೇವಲ ಸಭ್ಯತೆಯನ್ನು ಮಾತ್ರ ಮೀರಿಲ್ಲ ನಮ್ಮ ದೇಶದ ಏಕೈಕ ಮಹಿಳಾ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಬಗ್ಗೆಯೂ ದ್ವೇಷದ ಹೇಳಿಕೆ ನೀಡಿದ್ದಾರೆ ಎಂದು ಟಿಎಂಸಿ ತನ್ನ ದೂರಿನಲ್ಲಿ ಹೇಳಿದೆ.