ನಾನು ಚುನಾವಣೆಯಲ್ಲಿ ಗೆದ್ದರೆ ನಟನೆ ಬಿಟ್ಟುಬಿಡುತ್ತೇನೆ: ಕಂಗನಾ ರಣಾವತ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ ನಟಿ ಕಂಗನಾ ರಣಾವತ್‌ ಅವರು ಹಿಮಾಚಲ ಪ್ರದೇಶದ ಮಂಡಿ (Mandi) ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಜೂನ್‌ 1ರಂದು ಮಂಡಿ ಕ್ಷೇತ್ರದಲ್ಲಿ ಮತದಾನ ನಡೆಯುವ ಕಾರಣ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ.

ಇದರ ಬೆನ್ನಲ್ಲೇ, ಕಂಗನಾ ರಣಾವತ್‌ ಅವರು ಮಹತ್ವದ ಘೋಷಣೆ ಮಾಡಿದ್ದು, ಲೋಕಸಭೆ ಚುನಾವಣೆಯಲ್ಲಿ ನಾನು ಗೆದ್ದರೆ ನಟನೆಯನ್ನು ಬಿಟ್ಟುಬಿಡುತ್ತೇನೆ ಎಂಬುದಾಗಿ ಹೇಳಿದ್ದಾರೆ.

ಆಜ್‌ ತಕ್‌ ಸುದ್ದಿವಾಹಿನಿಗೆ ಸಂದರ್ಶನ ನೀಡುವ ವೇಳೆ , ನೀವು ಮಂಡಿ ಲೋಕಸಭೆಯಲ್ಲಿ ಗೆಲುವು ಸಾಧಿಸಿದರೆ ಏನೆಲ್ಲ ಮಾಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹೌದು, ಮಂಡಿಯಲ್ಲಿ ಗೆಲುವು ಸಾಧಿಸಿದ ಬಳಿಕ ನಾನು ಸಿನಿಮಾಗಳಲ್ಲಿ ನಟಿಸುವುದಿಲ್ಲ. ಆದರೆ, ನಮ್ಮ ಬಳಿ ತುಂಬ ಒಳ್ಳೆಯ ನಟಿ ಇದ್ದಾರೆ. ದಯಮಾಡಿ ನೀವು ಬಿಟ್ಟು ಹೋಗಬೇಡಿ ಎಂಬುದಾಗಿ ಹೆಚ್ಚಿನ ನಿರ್ದೇಶಕರು ಹೇಳುತ್ತಾರೆ. ಹೌದು, ನಾನೊಬ್ಬ ಒಳ್ಳೆ ನಟಿ ನಿಜ. ಇದೇ ಮೆಚ್ಚುಗೆಯನ್ನು ಸ್ವೀಕರಿಸಿ ನಾನು ಮುಂದೆ ಹೋಗುತ್ತೇನೆ ಎಂದು ತಿಳಿಸಿದ್ದಾರೆ. ಆ ಮೂಲಕ ಬಾಲಿವುಡ್‌, ನಟನೆ ತ್ಯಜಿಸುವುದನ್ನು ಅವರು ದೃಢಪಡಿಸಿದ್ದಾರೆ.

ಕಂಗನಾ ರಣಾವತ್‌ ಅವರ ಬಹುನಿರೀಕ್ಷಿತ ಸಿನಿಮಾ ಎಮರ್ಜನ್ಸಿ ಬಿಡುಗಡೆಗೆ ಸಿದ್ಧವಾಗುತ್ತಿದೆ. ತಾವೇ ನಿರ್ದೇಶಿಸಿದ ಸಿನಿಮಾದಲ್ಲಿ ಕಂಗನಾ ರಣಾವತ್‌ ಅವರು ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿದೆ ಎಂದು ಘೋಷಿಸಿದರೂ ಸಿನಿಮಾ ಬಗ್ಗೆ ಹೆಚ್ಚಿನ ನಿರೀಕ್ಷೆ ಇದೆ. ಪಂಗಾ, ಮಣಿಕರ್ಣಿಕಾ: ದಿ ಕ್ವೀನ್‌ ಆಫ್‌ ಜಾನ್ಸಿ, ಜಡ್ಜ್‌ಮೆಂಟಲ್‌ ಹೈ ಕ್ಯಾ, ತನು ವೆಡ್ಸ್‌ ಮನು ರಿಟರ್ನ್ಸ್‌ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇವರು ಅಭಿನಯದ ತಲೈವಿ ಸಿನಿಮಾಗೆ ಭಾರಿ ಮೆಚ್ಚುಗೆಯೂ ವ್ಯಕ್ತವಾಗಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!