ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ‘ಟ್ವೀಟ್ ಸಮರ’ ತಾರಕಕ್ಕೇರಿದೆ. ಫೇಸ್‌ಬುಕ್, ಎಕ್ಸ್ ವೇದಿಕೆಗಳಲ್ಲಿ ಎರಡೂ ಪಕ್ಷದ ನಾಯಕರು ಪರಸ್ಪರ ಟಾಂಗ್ ನೀಡುತ್ತಾ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಈ ರಾಜಕೀಯ ಜಿದ್ದಾಜಿದ್ದಿನ ಮಧ್ಯೆಯೇ ಜೆಡಿಎಸ್ ಒಂದು ಮಹತ್ವದ ಬದಲಾವಣೆಗೆ ಮುಂದಾಗಿದೆ.
ನಿನ್ನೆ ನಡೆದ ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಪಕ್ಷದ ಸಂಘಟನೆಗೆ ಸಂಬಂಧಿಸಿದಂತೆ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರಸ್ತುತ ಜೆಡಿಎಸ್ ಪಕ್ಷದ ಗುರುತಾಗಿರುವ ‘ತೆನೆ ಹೊತ್ತ ಮಹಿಳೆ’ ಚಿತ್ರದ ಜೊತೆಗೆ ‘ಚಕ್ರ’ದ ಗುರುತನ್ನು ಸೇರಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ.
ಈ ಹಿಂದೆ ಜನತಾದಳ ಅವಿಭಜಿತವಾಗಿದ್ದಾಗ ‘ಚಕ್ರ’ ಪ್ರಬಲ ಗುರುತಾಗಿತ್ತು. ಈಗ ಅದೇ ಚಕ್ರವನ್ನು ತೆನೆ ಹೊತ್ತ ಮಹಿಳೆಯ ಚಿತ್ರದೊಂದಿಗೆ ವಿಲೀನಗೊಳಿಸಿ, ಪಕ್ಷಕ್ಕೆ ಹೊಸ ಕಳೆ ನೀಡಲು ನಾಯಕರು ಉದ್ದೇಶಿಸಿದ್ದಾರೆ. ಈ ಬದಲಾವಣೆಯು ಪಕ್ಷಕ್ಕೆ ಹೊಸ ಚೈತನ್ಯ ನೀಡಲಿದೆಯೇ ಮತ್ತು ವಿರೋಧ ಪಕ್ಷಗಳ ಟೀಕೆಗೆ ಇದು ಹೇಗೆ ಉತ್ತರವಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

