ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳ ಮತ್ತೆ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿದೆ. ರಾಜ್ಯದಲ್ಲಿ ಮೇ 31ರಂದು 16 ಸಾವಿರಕ್ಕೂ ಅಧಿಕ ಅಧಿಕಾರಿಗಳು ನಿವೃತ್ತರಾಗುತ್ತಿದ್ದು, ಇವರಿಗೆ ಸವಲತ್ತು ನೀಡಲು ತೀವ್ರ ಆರ್ಥಿಕ ಸಂಕಷ್ಟ ಎದುರಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಕೇಂದ್ರದ ಮೊರೆಹೋಗಿದೆ.
ಆರ್ಥಿಕ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳಲು 9000 ಕೋಟಿ ರೂ.ಗಳ ಅಗತ್ಯವಿದ್ದು, ಸಾಲ ಪಡೆಯಲು ಅನುಮತಿ ನೀಡುವಂತೆ ಹಣಕಾಸು ಇಲಾಖೆ ಕಾರ್ಯದರ್ಶಿ ಕೇಂದ್ರ ಹಣಕಾಸು ಸಚಿವಾಲಯಕ್ಕೆ ಪತ್ರ ರವಾನಿಸಿದ್ದಾರೆ. ಈ ಹಣಕಾಸು ವರ್ಷದಲ್ಲಿ ಕೇರಳ 37,512 ಕೋಟಿ ರೂ. ಸಾಲ ಪಡೆಯಲು ಅರ್ಹವಾಗಿದೆ. ಈ ಪೈಕಿ ಮುಂಗಡವಾಗಿ 3000 ಕೋಟಿ ರೂ. ಸಾಲ ಮಾಡಿ ಚುನಾವಣೆಗೂ ಮುನ್ನವೇ ಪಿಂಚಣಿ ಮತ್ತು ಬಾಕಿ ಪಾವತಿ ಮಾಡಲಾಗಿದೆ.
ಮುಂದಿನ ತಿಂಗಳ ಆರಂಭದಲ್ಲಿ ಸಂಬಳ ಹಾಗೂ ಪಿಂಚಣಿ ಪಾವತಿಸಲು ಸಧ್ಯ ಸರ್ಕಾರಕ್ಕೆ 900 ಕೋಟಿ ರೂ.ಗಳ ಅಗತ್ಯವಿದ್ದು, ಸಾಲ ಪಡೆಯುವುದೊಂದೇ ಇದಕ್ಕೆ ದಾರಿ ಎಂಬ ತೀರ್ಮಾನಕ್ಕೆ ಸರ್ಕಾರ ಬಂದಿದೆ.