ಹೊಸದಿಗಂತ ಡಿಜಿಟಲ್ ಮಂಗಳೂರು:
ಉಡುಪಿ ಜಿಲ್ಲೆಯ ಮೂಡುಗೋಪಾಡಿಯ ದಾಸನಹಾಡಿಯಲ್ಲಿ ತನ್ನ ತಾಯಿಯ ಕೊಳೆತ ಶವದ ಜೊತೆಗೇ ಅನ್ನಾಹಾರವಿಲ್ಲದೆ ಮೂರು ದಿನಗಳನ್ನು ಕಳೆದಿದ್ದ ಬುದ್ದಿಮಾಂದ್ಯ ಯುವತಿ ಸಾವನ್ನಪ್ಪಿದ್ದಾರೆ.
ದಾಸನಹಾಡಿ ಎಂಬಲ್ಲಿ ತನ್ನ ಬುದ್ದಿಮಾಂದ್ಯ ಮಗಳು ಪ್ರಗತಿಯೊಂದಿಗೆ ವಾಸವಿದ್ದ ಜಯಂತಿ ಶೆಟ್ಟಿ (62) ಕೆಲವು ದಿನಗಳ ಹಿಂದೆ ಸಾವನ್ನಪ್ಪಿದ್ದರು. ಈ ಘಟನೆ ಬೆಳಕಿಗೆ ಬಂದಿರಲಿಲ್ಲ. ಇದಕ್ಕೂ ಮುನ್ನ ಜಯಂತಿ, ಮೇ.12ರಂದು ಕುಂಭಾಸಿ ದೇವಸ್ಥಾನಕ್ಕೆ ತೆರಳಿ ಮಗಳ ಆರೋಗ್ಯ ಚೇತರಿಕೆಗಾಗಿ ವಿಶೇಷ ಸೇವೆ ಮಾಡಿಸಿದ್ದರು. ಬಳಿಕ ಮೇ.13ರಂದು ಕೋಟೇಶ್ವರ ದೇವಸ್ಥಾನಕ್ಕೆ ತೆರಳಲು ಸ್ಥಳೀಯ ಆಟೋ ರಿಕ್ಷಾ ಚಾಲಕನಿಗೆ ಮಾಹಿತಿ ನೀಡಿದ್ದರು. ಅಟೋ ಚಾಲಕ ಅಂದು ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಅದಾಗಿ ಮೂರು ದಿನಗಳು ಕಳೆದರೂ ಈ ಮನೆಯ ಗೇಟ್, ಬಾಗಿಲು ಮುಚ್ಚಿಕೊಂಡಿದ್ದವು. ಮನೆಯ ಎಲ್ಲಾ ಕೊಠಡಿಗಳ ಲೈಟ್‌ಗಳು ಹಗಲಿನಲ್ಲಿಯೂ ಉರಿಯುತ್ತಿದ್ದವು. ಆರಂಭದಲ್ಲಿ ಸ್ಥಳೀಯರು ಮನೆಮಂದಿ ಎಲ್ಲಿಗಾದರೂ ಹೋಗಿರಬಹುದು ಎಂದು ಸುಮ್ಮನಿದ್ದರು. ಆದರೆ ಗುರುವಾರ ರಾತ್ರಿ ಮನೆಯಿಂದ ದುರ್ವಾಸನೆ ಬರುತ್ತಿದ್ದದ್ದನ್ನು ಗಮನಿಸಿ ಪರಿಶೀಲಿಸಿದಾಗ ಜಯಂತಿಯ ಶವ ಕೊಳೆತ ಸ್ಥಿತಿಯಲ್ಲಿದ್ದು, ಅನ್ನಾಹಾರವಿಲ್ಲದೆ ಮಗಳು ಅಸ್ವಸ್ಥಗೊಂಡ ಸ್ಥಿತಿಯಲ್ಲಿದ್ದರು. ತಕ್ಷಣವೇ ಜಯಂತಿ ಶೆಟ್ಟಿಯವರ ಸಂಬಂಧಿಕರನ್ನು ಪತ್ತೆಹಚ್ಚಿ ಕರೆಸಿ ಶವವನ್ನು ಆಸ್ಪತ್ರೆಗೆ ಸಾಗಿಸಿ ಯುವತಿಯನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸಿದೆ ಪ್ರಗತಿ ಕೊನೆಯುಸಿರೆಳೆದಿದ್ದಾರೆ.
ಮೂಲತಃ ಹೆಂಗವಳ್ಳಿಯವರಾಗಿದ್ದ ಈ ಕುಟುಂಬ ಕಳೆದ ಒಂದೂವರೆ ದಶಕಗಳಿಂದ ಮೂಡುಗೋಪಾಡಿಯಲ್ಲಿ ನೆಲೆಸಿದೆ. ಜಯಂತಿಯವರ ಪತಿ ನಿಧನರಾದ ಬಳಿಕ ತಾಯಿ-ಮಗಳು ಇಲ್ಲಿ ವಾಸವಿದ್ದರು. ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದ ಜಯಂತಿ ಶೆಟ್ಟಿ, ವೈದ್ಯಕೀಯ ಚಿಕಿತ್ಸೆ ಪಡೆಯುತಿದ್ದರು. ಮಗಳು ಹುಟ್ಟಿನಿಂದಲೇ ಬುದ್ಧಿಮಾಂದ್ಯೆಯಾಗಿದ್ದು, ಇತ್ತೀಚಿನ ದಿನದಲ್ಲಿ ಸಕ್ಕರೆ ಕಾಯಿಲೆಯ ಹಿನ್ನೆಲೆಯಲ್ಲಿ ಆಕೆಯ ಒಂದು ಕಾಲು ಕತ್ತರಿಸಲಾಗಿತ್ತು. ಸಂಕಷ್ಟದ ನಡುವೆ ತಾಯಿ ಮಗಳನ್ನು ಮುದ್ದಾಗಿ ಸಾಕಿ ಜೀವನ ನಡೆಸುತ್ತಿದ್ದರು.