Tuesday, January 13, 2026
Tuesday, January 13, 2026
spot_img

ಹ್ಯಾಟ್ರಿಕ್ 50+ ಸ್ಕೋರ್: ದ.ಆಫ್ರಿಕಾ ಬೆನ್ನಲ್ಲೇ ಸ್ಕಾಟ್ಲೆಂಡ್ ಬೌಲರ್‌ಗಳನ್ನು ಬೆಂಡೆತ್ತಿದ ವೈಭವ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

2026ರ ಅಂಡರ್-19 ವಿಶ್ವಕಪ್ ಕ್ರಿಕೆಟ್ ಹಬ್ಬಕ್ಕೆ ಕೌಂಟ್ ಡೌನ್ ಶುರುವಾಗಿದೆ. ಜನವರಿ 15 ರಿಂದ ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ಟೂರ್ನಿ ಆರಂಭವಾಗಲಿದ್ದು, ಸದ್ಯ ಅಭ್ಯಾಸ ಪಂದ್ಯಗಳಲ್ಲಿ ಯುವ ಭಾರತ ತಂಡ ಅಬ್ಬರಿಸುತ್ತಿದೆ. ಇಂದು ನಡೆದ ಸ್ಕಾಟ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತದ 14 ವರ್ಷದ ಪ್ರತಿಭೆ ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ಎದುರಾಳಿ ತಂಡಕ್ಕೆ ನಡುಕ ಹುಟ್ಟಿಸಿದ್ದಾರೆ.

ಮೊದಲ ಬಾರಿಗೆ ವಿಶ್ವಕಪ್ ಆಡುತ್ತಿರುವ ವೈಭವ್ ಸೂರ್ಯವಂಶಿ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮೊರೆಹೋದರು. ಕೇವಲ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಇವರು, ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದರು. ಒಟ್ಟು 50 ಎಸೆತಗಳನ್ನು ಎದುರಿಸಿದ ವೈಭವ್, 9 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್ ನೆರವಿನಿಂದ 96 ರನ್ ಗಳಿಸಿದರು. ಕೇವಲ 4 ರನ್‌ಗಳಿಂದ ಶತಕ ವಂಚಿತರಾದರಾದರೂ, ಅವರ ಈ ಇನ್ನಿಂಗ್ಸ್ ಭಾರತದ ಭರ್ಜರಿ ಜಯಕ್ಕೆ ಬುನಾದಿ ಹಾಕಿಕೊಟ್ಟಿತು.

ವೈಭವ್ ಅವರಿಗೆ ಇದು ಸತತ ಮೂರನೇ 50+ ಸ್ಕೋರ್ ಆಗಿದೆ. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ 68 ಮತ್ತು 127 ರನ್ ಸಿಡಿಸಿ ಮಿಂಚಿದ್ದ ಇವರು, ಈಗ ಸ್ಕಾಟ್ಲೆಂಡ್ ವಿರುದ್ಧವೂ ಅದೇ ಫಾರ್ಮ್ ಮುಂದುವರಿಸಿದ್ದಾರೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಅಂತಹ ಬಲಿಷ್ಠ ತಂಡಗಳ ವಿರುದ್ಧ ಆಡಿದ ಅನುಭವ ಹೊಂದಿರುವ ವೈಭವ್, ಟೀಂ ಇಂಡಿಯಾದ ಭರವಸೆಯ ಆಟಗಾರನಾಗಿ ಹೊರಹೊಮ್ಮಿದ್ದಾರೆ.

ವಿಶ್ವಕಪ್‌ನ ಅಧಿಕೃತ ಪಂದ್ಯಗಳಲ್ಲಿ ಭಾರತ ಜನವರಿ 15 ರಂದು ಅಮೆರಿಕ ತಂಡವನ್ನು ಎದುರಿಸಲಿದೆ. ವೈಭವ್ ಸೂರ್ಯವಂಶಿ ಅವರ ಪ್ರಸ್ತುತ ಫಾರ್ಮ್ ನೋಡಿದರೆ, ವಿಶ್ವಕಪ್ ಟ್ರೋಫಿ ಉಳಿಸಿಕೊಳ್ಳುವ ಭಾರತದ ಕನಸಿಗೆ ದೊಡ್ಡ ಬಲ ಸಿಕ್ಕಂತಾಗಿದೆ.

Most Read

error: Content is protected !!