ನಾವು ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸ ನನಗಿದೆ, ಅತಿಯಾದ ಆತ್ಮವಿಶ್ವಾಸ ಇಲ್ಲ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 370, ಎನ್‌ಡಿಎ ಒಕ್ಕೂಟ 400 ಸ್ಥಾನಗಳನ್ನು ಗೆಲ್ಲುವುದರೊಂದಿಗೆ 3ನೇ ಬಾರಿಗೆ ಅಧಿಕಾರದ ಗದ್ದುಗೆ ಏರುವ ವಿಶ್ವಾಸವನ್ನು ಪ್ರಧಾನಿ ನರೇಂದ್ರ ಮೋದಿ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ನಾಲ್ಕು ಹಂತದ ಮತದಾನ ಮುಕ್ತಾಯಗೊಂಡಿದೆ. ಸೋಮವಾರ (ಮೇ 20) ರಾಯ್‌ ಬರೇಲಿ, ಅಮೇಥಿ ಹೈವೋಲ್ಟೇಜ್‌ ಕ್ಷೇತ್ರಗಳು ಸೇರಿ ಒಟ್ಟು 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಇತ್ತ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ವಿಶೇಷ ಸಂದರ್ಶನವೊಂದರಲ್ಲಿ ಮಾತನಾಡಿದ ಮೋದಿ, ನಮ್ಮ ಗುರಿ ತುಂಬಾ ದೊಡ್ಡದಿದೆ. ನಾವು ಗೆದ್ದೇ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸ ನನಗಿದೆ. ಅತಿಯಾದ ಆತ್ಮವಿಶ್ವಾಸ ಇಲ್ಲ. ಈ ಹಿಂದೆಯೂ ಅತಿಯಾದ ಆತ್ಮವಿಶ್ವಾಸದಿಂದ ಗೆದ್ದಿಲ್ಲ. ನಮ್ಮ ಮುಂದಿನ ಆಡಳಿತ ಒಂದು ಪ್ರದೇಶಕ್ಕೆ ಸೀಮಿತವಾಗಿರುವುದಿಲ್ಲ. ದೊಡ್ಡ ಗುರಿಯನ್ನು ಕ್ಷಿಪ್ರವಾಗಿ ಸಾಧಿಸುವ ಛಲ ಹೊಂದಿದ್ದೇವೆ. ಗುರಿ ದೊಡ್ಡದಾಗಿ ಇಟ್ಟುಕೊಂಡು, ಅದರ ವೇಗಕ್ಕೆ ತಕ್ಕಂತೆ ಮುನ್ನಡೆಯುವುದು ನಮ್ಮ ಉದ್ದೇಶವಾಗಿದೆ ಎಂದು ಮೋದಿ ತಿಳಿಸಿದರು.

ದೇಶದ ಚುನಾವಣೆ ಫಲಿತಾಂಶ ಏನಾಗಲಿದೆ ಎಂಬುದು ಎಲ್ಲರಿಗೂ ತಿಳಿದಿದೆ. ನಾವು 3ನೇ ಅವಧಿಯ ಆಡಳಿತಕ್ಕೆ ಸಿದ್ಧವಾಗುತ್ತಿದ್ದೇವೆ. ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ಏನೆಲ್ಲ ತೀರ್ಮಾನ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಕಾರ್ಯಸೂಚಿಯನ್ನು ಹಾಕಿಕೊಂಡು ಬನ್ನಿ ಅಂತ ಈಗಾಗಲೇ ನಮ್ಮ ಸಚಿವರಿಗೆ ತಿಳಿಸಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಮತ್ತು ಇಂಡಿಯಾ ಒಕ್ಕೂಟವು ಈವರೆಗೆ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸದೇ ಇರುವುದರಿಂದ ಮತದಾರರು ಅವರಿಂದ ಆಯ್ಕೆಯಾಗುವ ಅವಕಾಶವನ್ನೇ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!