ಹೊಸದಿಗಂತ ಡಿಜಿಟಲ್ ಡೆಸ್ಕ್:
ನನ್ನ ಸೇರಿದಂತೆ ನಮ್ಮ ಸುತ್ತಲೂ ಇರುವ ಸುಮಾರು 30 ಜನರ ಪೋನ್ ಟ್ಯಾಪ್ (Phone Tapping) ಆಗುತ್ತಿದೆ. ರೇವಣ್ಣ ಫೋನ್ ಕೂಡ ಟ್ಯಾಪ್ ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಹಾಸನ ಪೆನ್ಡ್ರೈವ್ ಪ್ರಕರಣದ ಬಗ್ಗೆ ನಗರದಲ್ಲಿ ಪ್ರತಿಕ್ರಿಯಿಸಿರುವ ಅವರು, ಪ್ರಜ್ವಲ್ ಎಲ್ಲಿದ್ದರೂ ಕರೆಸುವುದಕ್ಕೆ ರೇವಣ್ಣಗೆ ಹೇಳಿದ್ದೇನೆ. ಆದರೆ. ನಾವು ಏನು ಮಾತನಾಡುತ್ತೇವೆ ಎಂದು ತಿಳಿಯಲು ಫೋನ್ ಕದ್ದಾಲಿಗೆ ಮಾಡಲಾಗುತ್ತಿದೆ ಎಂದು ಮಾಜಿ ಸಿಎಂ ಎಚ್ಡಿಕೆ ಕಿಡಿಕಾರಿದ್ದಾರೆ.
ಪ್ರಕರಣದಿಂದ ನೊಂದು ದೇವೇಗೌಡರು ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ಕೊಡಲು ನಿರ್ಧಾರ ಮಾಡಿದ್ದರು. ಯಾವ ಮುಖ ಇಟ್ಟುಕೊಂಡು ನಾನು ರಾಜ್ಯಸಭೆಗೆ ಹೋಗಲಿ ಅಂತ ಹೇಳಿ, ರಾಜೀನಾಮೆ ಕೊಡಲು ಮುಂದಾಗಿದ್ದರು. ಎಷ್ಟು ದಿನ ಅಂತ ಹೊರಗೆ ಇರಬೇಕು. ಬಂದು ತನಿಖೆ ಎದುರಿಸಬೇಕು ಎಂದು ಅವರು ಹೇಳಿರುವುದಾಗಿ ಎಚ್ಡಿಕೆ ಹೇಳಿದ್ದಾರೆ.
ಇನ್ನು ಪ್ರಜ್ವಲ್ ಎಲ್ಲಿದ್ದರೂ ಕರೆಸಲು ಮಾಧ್ಯಮದ ಮೂಲಕ ಮನವಿ ಮಾಡು ಅಂತ ರೇವಣ್ಣಗೆ ಹೇಳಿದ್ದೇನೆ. ದೇವೇಗೌಡರು ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ಕೊಡಲು ಮುಂದಾದಾಗ, ಯಾರೋ ಮಾಡಿದ ತಪ್ಪಿಗೆ ನೀವು ರಾಜೀನಾಮೆ ಕೊಟ್ಟರೆ ರಾಜ್ಯಕ್ಕೆ ನಷ್ಟ ಅಂತ ಹೇಳಿದ್ದೇನೆ. ಈ ಪ್ರಕರಣದಿಂದ ದೇವೇಗೌಡ್ರು ನೊಂದಿದ್ದಾರೆ. ಯಾವ ಮುಖ ಹೊತ್ತು ರಾಜ್ಯಸಭೆಯಲ್ಲಿ ಕೂರಲಿ ಅಂತ ಹೇಳಿರುವುದಾಗಿ ತಿಳಿಸಿದ್ದಾರೆ.