ಹೊಸದಿಗಂತ ಮೈಸೂರು:
ರಾಜ್ಯ ಕಾಂಗ್ರೆಸ್ ಸರ್ಕಾರ ವಿಧಾನಸಭೆಯಲ್ಲಿ ಬಹುಮತ ಇರುವ ಕಾರಣ, ನಾನಾ ಕಾಯಿದೆಗಳನ್ನು ವಿಶ್ವಾಸಕ್ಕೆ ಪಡೆಯದೆ ರೂಪಿಸುತ್ತಿರುವುದನ್ನು ನಿಯಂತ್ರಿಸಲು ವಿಧಾನ ಪರಿಷತ್‌ನಲ್ಲಿ ಮೈತ್ರಿ ಪಕ್ಷಕ್ಕೆ ಬಹುಮತ ಬರಬೇಕಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಹೇಳಿದರು.
ಮಂಗಳವಾರ ರಾತ್ರಿ ನಗರದ ನಿವೇದಿತಾ ನಗರದ ಖಾಸಗಿ ಕಲ್ಯಾಣಮಂಟಪದಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣಾ ಸಂಬಂಧ JDS- BJP ಮೈತ್ರಿಕೂಟದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು , ರಾಜ್ಯ ಸರ್ಕಾರವನ್ನು ನಿಯಂತ್ರಿಸಬೇಕಾದರೆ ವಿಧಾನ ಪರಿಷತ್‌ನಲ್ಲಿ ಬಹುಮತ ಬೇಕಿದೆ. ಮೈತ್ರಿ ಒಂದಾದ ಮೇಲೆ ಕಾಂಗ್ರೆಸ್ ನಲ್ಲಿ ಭಯ ಉಂಟಾಗಿದೆ. ವಿಧಾನಸಭೆಯಲ್ಲಿ ಬಹುಮತ ಇರುವ ಕಾರಣ ತಮ್ಮ ಅನುಕೂಲಕ್ಕೆ ತಕ್ಕಂತೆ ಕಾಯಿದೆ ರೂಪಿಸುತ್ತಿದ್ದಾರೆ. ಇದಕ್ಕೆ ಅವಕಾಶ ಕೊಡದಂತೆ ಪರಿಷತ್‌ನಲ್ಲಿ ಬಹುಮತ ಪಡೆಯಬೇಕಾಗಿದೆ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಶಿಕ್ಷಣ ವಿರೋಧಿ ಆಗಿದೆ. BJP ಮತ್ತು JDS ಸರ್ಕಾರ ಇದ್ದಾಗ ಶಿಕ್ಷಣಕ್ಕೆ ಮಹತ್ವ ನೀಡಲಾಗಿತ್ತು. ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿತ್ತು ಎಂದು ತಿಳಿಸಿದರು.