ಹೊಸದಿಗಂತ ಡಿಜಿಟಲ್ ಡೆಸ್ಕ್:
14 ವರ್ಷಗಳ ಹಿಂದೆ ಇದೇ ದಿನದಂದು ಕಡಲನಗರಿ ಬೆಚ್ಚಿಬಿದ್ದಿತ್ತು. ಪ್ರವಾಸಕ್ಕೆಂದು, ಕೆಲಸಕ್ಕೆಂದು, ಮನೆಗೆಂದು ವಿಮಾನದಲ್ಲಿ ಕೂತು ಪ್ರಯಾಣಿಸಿದ್ದ 158 ಮಂದಿ ನಿಮಿಷದಲ್ಲೇ ಸಜೀವದಹನವಾಗಿದ್ದರು. ಈ ಕರಾಳ ದಿನಕ್ಕೆ ಇಂದು 14 ವರ್ಷಗಳು ತುಂಬಿವೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇನ್ನೇನು ಲ್ಯಾಂಡ್ ಆಗಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ನಿಯಂತ್ರಣಕ್ಕೆ ಸಿಗದೇ ರನ್‌ವೇಯಿಂದ ಜಾರಿ ಕಣಿವೆಗೆ ಸರಿದಿತ್ತು. ಟೇಬಲ್ ಟಾಪ್‌ನಲ್ಲಿರುವ ರನ್‌ವೇನಿಂದ ವಿಮಾನ ಕಂದಕಕ್ಕೆ ಉರುಳುತ್ತಲೇ ಸ್ಫೋಟಗೊಂಡು ಇಬ್ಭಾಗವಾಗಿತ್ತು. 166 ಮಂದಿ ಪ್ರಯಾಣಿಕರಿದ್ದ ವಿಮಾನದಲ್ಲಿ 158 ಮಂದಿ ಸಜೀವ ದಹನವಾಗಿದ್ದರು.
ಮೇ 22, 2010ರ ಈ ಘಟನೆ ಇಂದಿಗೂ ಕರಾವಳಿ ಇತಿಹಾಸದಲ್ಲೇ ಬಹುದೊಡ್ಡ ದುರಂತ, ಗಾಯ ವಾಸಿಯಾದರೂ ಕಲೆ ಉಳಿದುಹೋಗುವಂತೆ ಜನರ ಮನಸ್ಸಿನಲ್ಲಿ ಆ ದಿನದ ನೋವು ಇಂದಿಗೂ ಇದೆ, ದುರಂತದಲ್ಲಿ ತಮ್ಮವರನ್ನು ಕಳೆದುಕೊಂಡ ಎಷ್ಟೋ ಪ್ರೀತಿಪಾತ್ರರು ಇಂದಿಗೂ ಕಣ್ಣೀರಿಡುತ್ತಿದ್ದಾರೆ.
ವಿಮಾನ ಇಬ್ಭಾಗವಾಗುತ್ತಿದ್ದಂತೆಯೇ ಎಂಟು ಮಂದಿ ನೆಲಕ್ಕೆ ಹಾರಿದ್ದಾರೆ, ಬಾಲಕಿಯೊಬ್ಬಳು ಮರದ ಕೊಂಬೆಗೆ ಸಿಲುಕಿದ್ದು, ಆಕೆಯ ಪ್ರಾಣ ಉಳಿದಿತ್ತು. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಕೇರಳ ರಾಜ್ಯದ ಪ್ರಯಾಣಿಕರು ಅಂದು ಆ ದುರಂತ ವಿಮಾನದಲ್ಲಿದ್ದರು. 19 ಮಕ್ಕಳು, 4 ಕಂದಮ್ಮಗಳು, ವಿಮಾನ ಸಿಬ್ಬಂದಿಗಳು ಕೂಡಾ ಅಂದಿನ ದುರಂತದಲ್ಲಿ ಮಡಿದಿದ್ದರು.
ವಿಮಾನದ ಕಾಕ್‌ಪಿಟ್‌ನಲ್ಲಿ ಹಾಗೂ ಕಪ್ಪು ಪೆಟ್ಟಿಗೆಯಲ್ಲಿ ದಾಖಲಾದ ಧ್ವನಿ ಮುದ್ರಿಕೆ ಪ್ರಕಾರ ವಿಶ್ಲೇಷಣೆ ನಡೆಸಿದಾಗ, ಸಹ ಪೈಲಟ್ ನೀಡಿದ್ದ ಎಚ್ಚರಿಕೆಯನ್ನು ಮುಖ್ಯ ಪೈಲಟ್ ಪರಿಗಣಿಸದೇ ಇರೋದು ಆ ದುರಂತಕ್ಕೆ ಕಾರಣವಾಗಿತ್ತು. ಇನ್ನು ಕೆಲವೊಮ್ಮೆ ಪೈಲಟ್ ನಿದ್ದೆಗೆ ಜಾರಿದ್ದರಿಂದ ದುರಂತ ಸಂಭವಿಸಿದೆ ಎಂದೂ ಹೇಳಲಾಗಿದೆ. ರನ್‌ವೇ ನಿರ್ಧರಿತ ಸ್ಥಾನದಲ್ಲಿ ಇಳಿಸದೇ ಮುಂದಕ್ಕೆ ಇಳಿಸಲು ಪ್ರಯತ್ನಿಸಿದ್ದೇ ವಿಮಾನ ರನ್‌ವೇ ಬಿಟ್ಟು ಮುಂದೆ ಹೋಗುವಂತೆ ಮಾಡಿತ್ತು.
ದುರಂತದಲ್ಲಿ ಮಡಿದ 158 ಮಂದಿಯ ಸ್ಮರಣಾರ್ಥ ಕೂಳೂರಿನ ತಣ್ಣೀರುಬಾವಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಸ್ಮಾರಕ ನಿರ್ಮಿಸಿದೆ. ಪ್ರತಿ ವರ್ಷ ಮೇ 22 ರ ದುರಂತ ದಿನದಂದು ಆ ಸ್ಮಾರಕಕ್ಕೆ ತೆರಳಿ ಜಿಲ್ಲಾಡಳಿತ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸಿಕೊಂಡು ಬರಲಾಗಿದೆ. ದುರಂತದಲ್ಲಿ ಮಡಿದವರ ಕುಟುಂಬಿಕರು, ಸಾರ್ವಜನಿಕರು ಭಾಗವಹಿಸುತ್ತಾರೆ.