ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೆಕ್ನಾಲಜಿ ಎಷ್ಟೇ ಮುಂದುವರಿದರೂ ಈಗಲೂ ಮೂಢನಂಬಿಕೆಯನ್ನು ಗಾಢವಾಗಿ ಆಚರಿಸುವ ಜನರಿದ್ದಾರೆ. ತಮ್ಮ ಏಳಿಗೆಗಾಗಿ ಜನರನ್ನು ಬಲಿಕೊಡುತ್ತಾರೆ. ಇಂಥದ್ದೇ ಒಂದು ಪ್ರಕರಣ ಉತ್ತರ ಪ್ರದೇಶದಲ್ಲಿ ನಡೆದಿದೆ.
ಏನಿದು ಪ್ರಕರಣ?
ಮುಜಾಫರ್ ನಗರದ ಕತೌಲಿ ನಗರದಲ್ಲಿ ಅಂಕಿತಾ ಎಂಬ ಮಹಿಳೆಗೆ ಆತ್ಮವೊಂದರ ಕಾಟ ಆಗಿದ್ದು, ಆತ್ಮದ ಕಾಟದಿಂದ ಬೇಸತ್ತಿದ್ದರಂತೆ. ಈ ಕಾರಣದಿಂದ ಆಕೆ ಭಗತ್ ರಾಮ್ಗೋಪಾಲ್ ಚೌಧರಿ ಎಂಬ ಮಂತ್ರವಾದಿಯೊಬ್ಬನನ್ನ ಸಂಪರ್ಕ ಮಾಡಿದ್ದಾಳೆ.
ಮಕ್ಕಳನ್ನ ಬಲಿ ಕೊಟ್ಟರೆ ಆತ್ಮದಿಂದ ಮುಕ್ತಿ ಹೊಂದಬಹುದು ಎಂದು ಆತ ಸಲಹೆ ಕೊಟ್ಟಿದ್ದ. ಮಂತ್ರವಾದಿಯ ಸಲಹೆಯಂತೆ ಒಂದು ತಿಂಗಳ ಅವಧಿಯಲ್ಲಿ ಎರಡು ಪುಟ್ಟ ಮಕ್ಕಳನ್ನ ಅಂಕಿತಾ ಬಲಿ ಕೊಟ್ಟಿದ್ದಾಳೆ. ತನ್ನ ಸೋದರಳಿಯರನ್ನೇ ಬಲಿಕೊಟ್ಟಿದ್ದಳು. ಇದಕ್ಕೆ ಅಂಕಿತಾ ತಾಯಿ ರೀನಾ ಸಾಥ್ ನೀಡಿದ್ದಾಳೆ.
ಮೇ 17ರಂದು 7 ವರ್ಷದ ಮಗು ಕೇಶವ್ ಮೃತದೇಹ ಮನೆಯಲ್ಲಿ ಸಿಕ್ಕಿತ್ತು. ಈ ಬೆನ್ನಲ್ಲೇ ಕೇಶವ್ ತಾಯಿ ಸೀಮಾ ಪೊಲೀಸ್ ಕಂಪ್ಲೆಂಟ್ ನೀಡಿದ್ದರು. ಈ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಇದೀಗ ಸೋದರತ್ತೆ ಅಂಕಿತಾ ಹಾಗೂ, ತಾಯಿ ರೀನಾಳನ್ನ ಬಂಧಿಸಿದ್ದಾರೆ.
ಲೆಟರ್ ಬರೆದು ಸಿಕ್ಕಿಹಾಕಿಕೊಂಡ್ರು!
ಇಬ್ಬರ ಬಂಧನವೇನೋ ಆಗಿದೆ. ಕೇಶವ್ ಎಂಬ ಮಗುವನ್ನ ಉಸಿರುಗಟ್ಟಿಸಿ ಕೊಂದ ಬಳಿಕ, ರೆಡ್ ಇಂಕ್ನಲ್ಲಿ ಪತ್ರವೊಂದನ್ನ ಅಂಕಿತಾ ಬರೆದಿದ್ದಳು. ನನ್ನ ಆತ್ಮಕ್ಕೆ ಈಗ ಶಾಂತಿ ಸಿಕ್ಕಿದೆ ಎಂದು ಬರೆದು ದಿಕ್ಕು ತಪ್ಪಿಸಲು ಯತ್ನಿಸಿದ್ದಳು. ಪೊಲೀಸರಿಗೆ ಈ ಲೆಟರ್ ಸಿಕ್ಕಿದ್ದು, ಅಂಕಿತಾಳದ್ದೇ ಹ್ಯಾಂಡ್ರೈಟಿಂಗ್ ಅನ್ನೋದು ತಿಳಿದು ಬಂದಿತ್ತು. ಅದರಂತೆ ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಮಕ್ಕಳನ್ನ ಸಾಯಿಸಿದ್ದು ನಾವೇ ಎಂದು ರೀನಾ ಹಾಗೂ ಅಂಕಿತಾ ಒಪ್ಪಿಕೊಂಡಿದ್ದಾರೆ. ಮಂತ್ರವಾದಿಯನ್ನು ಪೊಲೀಸರು ಹುಡುಕುತ್ತಿದ್ದಾರೆ.