ಹೊಸದಿಗಂತ ಡಿಜಿಟಲ್ ಡೆಸ್ಕ್:
ಅನುಮಾಸ್ಪಾದವಾಗಿ ಸಾವನ್ನಪ್ಪಿದ್ದಾನೆಂಬ ಸಾರ್ವಜನಿಕರ ಮಾತಿನಂತೆ ಸಹೋದರ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಠಾಣೆಗೆ ದೂರು ನೀಡಿದ್ದು, ನ್ಯಾಯಾಲಯದ ಆದೇಶದಂತೆ ಕನ್ಯಾನ ಬಂಡಿತ್ತಡ್ಕದಲ್ಲಿ ದಫನ ಮಾಡಲಾಗಿದ್ದ ದೇಹವನ್ನು 17 ದಿನಗಳ ಬಳಿಕ ಮೇಲೆತ್ತಿ ಮರಣೋತ್ತರ ಪರೀಕ್ಷೆಯನ್ನು ಗುರುವಾರ ನಡೆಸಲಾಯಿತು.
ಕನ್ಯಾನದ ಬಂಡಿತ್ತಡ್ಕದಲ್ಲಿರುವ ರಹ್ಮಾನಿಯಾ ಜುಮ್ಮಾ ಮಸೀದಿಯ ಆವರಣದಲ್ಲಿ ದಫನ ಮಾಡಿದ್ದ ಸುಂಕದಕಟ್ಟೆ ಮಜೀರ್ಪಳ್ಳ ನಿವಾಸಿ ಅಶ್ರಫ್ (44) ಅವರ ದೇಹವನ್ನು ಬಂಟ್ವಾಳ ತಹಸೀಲ್ದಾರ್ ಡಿ. ಅರ್ಚನಾ ಭಟ್, ಮಂಜೇಶ್ವರ ಠಾಣೆಯ ವೃತ್ತ ನಿರೀಕ್ಷಕ ರಾಜೀವ್ ಕುಮಾರ್ ಕೆ., ಕೇರಳ ಆರೋಗ್ಯ ಇಲಾಖೆಯ ಡಾ. ಹರಿಕೃಷ್ಣ ಕಾಸರಗೋಡು, ಯೆನೊಪಾಯ ವಿಧಿವಿಜ್ಞಾನ ವಿಭಾಗ ಮುಖ್ಯಸ್ಥ ಡಾ. ಕಿಶೋರ್ ಕುಮಾರ್ ಬಿ. ಸಮ್ಮುಖದಲ್ಲಿ ಮೇಲೆತ್ತಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ದೇಹದ ವಿವಿಧ ಅಂಗಾಗಳ ಮಾದರಿಯನ್ನು ವಿಧಿವಿಜ್ಞಾನ ತಂಡ ಪಡೆದುಕೊಂಡಿದ್ದು, ಹೆಚ್ಚಿನ ತನಿಖೆಗಾಗಿ ಯೆನೊಪಾಯಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಅಧಿಕಾರಿಗಳ ಸೂಚನೆಯಂತೆ ಆಗಮಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿಯನ್ನು ಕೇರಳದ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡುವುದಾಗಿ ವಿಧಿವಿಜ್ಞಾನ ವಿಭಾಗದ ಅಧಿಕಾರಿಗಳು ಹೇಳಿದ್ದಾರೆ.
ಮಂಜೇಶ್ವರ ಠಾಣೆಯ ಎ. ಎಸ್. ಐ. ಮಧುಸೂದನನ್ ಕೆ. ಅವರನ್ನೊಳಗೊಂಡ ಪೊಲೀಸರ ತಂಡ ಅಗತ್ಯ ಕ್ರಮಗಳನ್ನು ನಡೆಸಿದರು. ಯೆನೊಪಾಯ ನ್ಯಾಯ ವೈದ್ಯ ಶಾಸ್ತ್ರ ಉಪನ್ಯಾಸಕ ಡಾ. ಶ್ಯಾಮ್ ಕಿಶೋರ್, ಡಾ. ಅಲೆನ್, ಅಂತ್ರೋಪೋಲಜಿಸ್ಟ್ ಡಾ. ನಸೀರ್ ಸೇರಿ 8 ಮಂದಿಯ ತಂಡ ಮರಣೋತ್ತರ ಪರೀಕ್ಷೆಯನ್ನು ನಡೆಸಿದರು.
ಮರಣೋತ್ತರ ಪರೀಕ್ಷೆ ಯಾಕಾಯಿತು?
ಕನ್ಯಾನ ಮೂಲದ ಸುಂಕದಕಟ್ಟೆ ಮಜೀರ್ಪಳ್ಳ ನಿವಾಸಿ ಅಶ್ರಫ್ ಗೂಡಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಮೇ.5ರಂದು ಆಹಾರ ಸೇವಿಸಿ ಮಲಗಿದ್ದು, ಮೇ.6ರಂದು ಬೆಳಗ್ಗೆ 6 ಗಂಟೆಗೆ ಸಾವನ್ನಪ್ಪಿದ ಸ್ಥಿತಿಯಲ್ಲಿದ್ದರು. ಹೃದಯಾಘಾತದಿಂದ ಮೃತ ಪಟ್ಟಿರಬಹುದೆಂಬ ತೀರ್ಮಾನಕ್ಕೆ ಬಂದು ಪತ್ನಿ, ಇಬ್ಬರು ಪುತ್ರರರು ದೇಹವನ್ನು ಮೇ.೬ರಂದು ಸಾಯಂಕಾಲ ಕನ್ಯಾನದ ಬಂಡಿತ್ತಡ್ಕದಲ್ಲಿರುವ ರಹ್ಮಾನಿಯಾ ಜುಮ್ಮಾ ಮಸೀದಿಯ ಆವರಣದಲ್ಲಿ ದಫನ ನಡೆಸಲಾಗಿತ್ತು. ಪುಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮೃತರ ಸಹೋದರ ಇಬ್ರಾಹಿಂ ಆ ದಿನವೇ ಊರಿಗೆ ಆಗಮಿಸಲಾಗಿರಲಿಲ್ಲ. ಮೂರನೇ ದಿನ ಮೃತ ಸಹೋದರನ ಮನೆಗೆ ಹೋದ ಸಂದರ್ಭದಲ್ಲಿ ಸೇರಿದ್ದ ವ್ಯಕ್ತಿಗಳು ಸಾವಿನ ಬಗ್ಗೆ ಅನುಮಾನಗಳನ್ನು ವ್ಯಕ್ತ ಪಡಿಸಿದ್ದಾರೆ. ವ್ಯಕ್ತಿಯೊಬ್ಬನ ಮೇಲೆ ಎಲ್ಲರೂ ಬೊಟ್ಟು ಮಾಡಿದ ಹಿನ್ನಲೆಯಲ್ಲಿ ಮಂಜೇಶ್ವರ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಿಸಿದ್ದರು. ತನಿಖೆಗೆ ಮುಂದಾಗಿರುವ ಪೊಲೀಸರಿಗೆ ಮೃತ ದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸುವಂತೆ ನ್ಯಾಯಾಲಯ ಸೂಚನೆ ನೀಡಿದೆ.