Monday, January 12, 2026

ಮಂಗಳೂರು ಲಿಟ್ ಫೆಸ್ಟ್‌ | ಪಾಕಿಸ್ತಾನದ ಜೊತೆ ರಾಜಿ, ಸಂಧಾನ, ಶಾಂತಿ ಅಸಾಧ್ಯ: ವಿಕ್ರಮ್ ಸೂದ್

ಹೊಸದಿಗಂತ ವರದಿ, ಮಂಗಳೂರು:

ಪಾಕಿಸ್ತಾನ, ಚೀನಾ ಹಾಗೂ ಭಾರತ ನಡುವೆ ಸಮಸ್ಯೆ ಇರುವುದು ಎಲ್ಲರಿಗೂ ಗೊತ್ತಿರುವಂಥದ್ದು. ಪಾಕಿಸ್ತಾನದ ಜೊತೆ ರಾಜಿ, ಸಂಧಾನ ಮಾಡಿ ಪ್ರಯೋಜನವಿಲ್ಲ. ಅವರ ಜೊತೆ ಶಾಂತಿ ಅಸಾಧ್ಯ ಎಂದು ಭಾರತದ ಗುಪ್ತಚರ ಸಂಸ್ಥೆ ‘ರಾ’ದ ಮಾಜಿ ಮುಖ್ಯಸ್ಥ ವಿಕ್ರಮ್ ಸೂದ್ ಹೇಳಿದರು.

ಮಂಗಳೂರಿನಲ್ಲಿ ನಡೆಯುತ್ತಿರುವ ಎಂಟನೇ ಆವೃತ್ತಿಯ ಲಿಟ್ ಫೆಸ್ಟ್‌ನಲ್ಲಿ ಶನಿವಾರ ‘ಗ್ರೇಟ್ ಪವರ್ ಗೇಮ್ಸ್’ ವಿಷಯದ ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನ ಯಾವತ್ತೂ ಬದಲಾಗಲ್ಲ ಎಂದು ಸಾರಿದರು.

ಈ ಹಿಂದೆ ಶ್ರೀಲಂಕಾ ಅಥವಾ ಬಾಂಗ್ಲಾದೇಶ ಕಷ್ಟದಲ್ಲಿದೆ ಎಂದಾಗ ಭಾರತ ಅವರ ಸಹಾಯಕ್ಕೆ ನಿಂತಿತ್ತು. ಆದರೆ, ಭಾರತಕ್ಕೆ ಸಂಕಷ್ಟ ಬಂದಾಗ ಯಾರೂ ಜೊತೆ ನಿಲ್ಲುವುದಿಲ್ಲ ಎಂದು ಹೇಳಿದರು.

ಪ್ರಸ್ತುತ ನಡೆಯುತ್ತಿರುವ ಅಮೆರಿಕ ಹಾಗೂ ವೆನೆಜುವೆಲಾ ಯುದ್ಧದ ಬಗ್ಗೆ ಮಾತನಾಡಿದ ಅವರು, ‘ಮೊದಲಿಗೆ ಅಮೆರಿಕ ಯುಕ್ರೇನ್ ವಿಷಯದಲ್ಲಿ ತಲೆ ಹಾಕಿತು, ಬಳಿಕ ಇಸ್ರೇಲ್ ಈಗ ವೆನೆಝುವೆಲಾ. ಪ್ರಪಂಚಾದ್ಯಂತ ಸಮಸ್ಯೆ ಮಾಡುವ ಉದ್ದೇಶ ಹೊಂದಿರುವ ದೇಶವದು. ಈ ಸಮಸ್ಯೆಗೆ ಯಾರು ಕಾರಣ ಎಂದು ಬಹಿರಂಗವಾಗಿ ಗೊತ್ತಾಗದಿರಬಹುದು ಆದರೆ, ಎಲ್ಲವನ್ನೂ ಸರಿ ಮಾಡುವ ಅಧ್ಯಕ್ಷ ನಮ್ಮ ದೇಶದಲ್ಲಿದ್ದಾರೆ ಎಂಬ ಮನೋಭಾವ ಹೊಂದಿರುವ ದೇಶವದು. ಸ್ವತಃ ನಾನೇ ಕಾನೂನು ಎಂಬ ಮನೋಭಾವ ಹೊಂದಿರುವ ಅಧ್ಯಕ್ಷ ಅಲ್ಲಿದ್ದಾರೆ ಎಂದರು.

ಅಮೆರಿಕಾ ಹಾಗೂ ಚೀನಾ ಯಾವತ್ತೂ ಭಾರತದ ಸಹಾಯಕ್ಕೆ ನಿಂತಿಲ್ಲ. ಎರಡೂ ದೇಶಗಳ ಜೊತೆ ತಾರ್ಕಿಕವಾಗಿ ವ್ಯವಹರಿಸುವ ದಾರಿಯನ್ನು ಭಾರತ ಆಯ್ಕೆ ಮಾಡಿಕೊಳ್ಳಬೇಕು. ಬಲಿಷ್ಠ ರಾಷ್ಟ್ರವಾಗಲು ಬಲಿಷ್ಠ ಸರ್ಕಾರದ ಅಗತ್ಯ ಮುಖ್ಯ. ಹೇಗೆ ಅಮೆರಿಕಾದ ಸರ್ಕಾರಿ ಪ್ರತಿನಿ ಭಾರತಕ್ಕೆ ಬಂದು ಸಹಾಯ ಕೇಳುವುದಿಲ್ಲವೋ ಅದೇ ರೀತಿ ಭಾರತ ಕೂಡ ಯಾರನ್ನೂ ಸಹಾಯ ಕೇಳದಿರುವಂತೆ ಆಗಬೇಕು. ಇತ್ತೀಚೆಗೆ ಅಂತಹ ಬೆಳವಣಿಗೆ ಕಾಣುತ್ತಿವೆ. ಬಾಲಾಕೊಟ್, ಉರಿ ಕೌಂಟರ್ ಅಟ್ಯಾಕ್ ಹಾಗೂ ಆಪರೇಶನ್ ಸಿಂದೂರ್ ಕೆಲವು ಉದಾಹರಣೆಗಳು. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ನಿಲುವುನ್ನು ಇನ್ನೂ ಗಟ್ಟಿಯಾಗಿ ಸ್ಥಾಪಿಸಬೇಕು. ಈಗ ಅಲ್ಲದಿದ್ದರೆ ಇನ್ನೆಂದೂ ಮೇಲೆ ಹೋಗಲು ಸಾಧ್ಯವಿಲ್ಲ ಎಂದು ಹೇಳಿದರು.

ಡಾ.ಶ್ರೀಪರ್ಣಾ ಪಾಠಕ್ ಈ ಸಂವಾದ ನಡೆಸಿಕೊಟ್ಟರು.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!