ಹೊಸದಿಗಂತ ವರದಿ, ಮಂಡ್ಯ :
ಮೈಸೂರು ನಗರದ ಕಲುಷಿತ ನೀರು ಕಾವೇರಿ ನದಿಯೊಡಲು ಸೇರುತ್ತಿರುವ ಹಿನ್ನೆನಲೆಯಲ್ಲಿ ಮೈಸೂರಿನ ಜಿಲ್ಲಾಧಿಕಾರಿ ಹಾಗೂ ಮಹಾನಗರ ಪಾಲಿಕೆಗೆ ಪತ್ರ ಬರೆಯಲಾಗಿದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ ತಿಳಿಸಿದರು.
ಸುದ್ಧಿಗಾರರಿಗೆ ಮಾಹಿತಿ ನೀಡಿದ ಅವರು, ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಲುಷಿತ ನೀರು ಕಾವೇರಿ ನದಿ, ನಾಲೆಗೆ ಬಿಟ್ಟಿರುವ ಬಗ್ಗೆ ದೂರು ಬಂದಿದೆ. ಪಂಪ್‌ಹೌಸ್ ಮೂಲಕ ಶ್ರೀರಂಗಪಟ್ಟಣದ ಗಂಜಾಂನ ವಾರ್ಡ್‌ಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗಿದೆ. ಸಾರ್ವಜನಿಕರ ದೂರಿನನ್ವಯ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಲಾಗಿದೆ. ಮೈಸೂರಿನ ತ್ಯಾಜ್ಯ ನೀರು ಕಾವೇರಿ ನದಿಗೆ ಬರುತ್ತಿದೆ. ಈಗಾಗಲೇ ನಮ್ಮ ಅಧಿಕಾರಿಗಳು ಮೈಸೂರು ಮಹಾನಗರ ಪಾಲಿಕೆಗೆ ಪತ್ರ ಬರೆದಿದ್ದಾರೆ. ತ್ಯಾಜ್ಯ ನೀರು ಬಳಸಬಾರದು ಎಂದು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ತ್ಯಾಜ್ಯ ನೀರು ಬಿಟ್ಟ ಬಳಿಕ ನಮ್ಮ ನೀರನ್ನು ಲಿಫ್ಟ್ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ತ್ಯಾಜ್ಯ ಬಿಡುವ ಸಂದರ್ಭದಲ್ಲಿ ಜಾಕ್ವೆಲ್ ಬಳಿ ನೀರನ್ನು ಲಿಫ್ಟ್ ಮಾಡುತ್ತಿಲ್ಲ ಇದು ಸೂಕ್ತ ಅಲ್ಲ ಎಂದು ತಿಳಿಸಿದರು.