ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಕೋಟ್ನ ಗೇಮ್ ಜೋನ್ನಲ್ಲಿ ನಡೆದ ಅಗ್ನಿ ಅನಾಹುತದ ಕುರಿತು ಗುಜರಾತ್ ಹೈಕೋರ್ಟ್ನ ವಿಶೇಷ ಪೀಠ ಸ್ವಯಂಪ್ರೇರಿತವಾಗಿ ವಿಚಾರಣೆಗೆ ಮುಂದಾಗಿದ್ದು, ದುರಂತಕ್ಕೆ ಮನುಷ್ಯನೇ ಕಾರಣ ಎಂಬುದು ಮೇಲ್ನೋಟಕ್ಕೆ ಅನ್ನಿಸುತ್ತಿದೆ ಎಂದು ಹೇಳಿದೆ.
ಇಂತಹ ಮನರಂಜನಾ ಕೇಂದ್ರಗಳು ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅಗತ್ಯ ಅನುಮತಿ ಪಡೆಯದೆಯೇ ತಲೆ ಎತ್ತಿವೆ ಎಂದು ನ್ಯಾಯಮೂರ್ತಿಗಳಾದ ಬಿರೇನ್ ವೈಷ್ಣವ್ ಮತ್ತು ದೇವನ್ ದೇಸಾಯಿ ಅವರು ಇದ್ದ ವಿಭಾಗೀಯ ಪೀಠವು ಹೇಳಿದೆ.
ಯಾವ ಕಾನೂನಿನ ಅಡಿಯಲ್ಲಿ ಅಧಿಕಾರಿಗಳು ಈ ಬಗೆಯ ಮನರಂಜನಾ ಘಟಕಗಳ ಸ್ಥಾಪನೆಗೆ ಅಥವಾ ಅವುಗಳ ಕಾರ್ಯಾಚರಣೆಗೆ ಅನುಮತಿ ನೀಡಿದ್ದಾರೆ ಎಂಬ ಬಗ್ಗೆ ಮಾಹಿತಿ ಪಡೆದು ವಿಚಾರಣೆಗೆ ಹಾಜರಾಗುವಂತೆ ಅಹಮದಾಬಾದ್, ವಡೋದರಾ, ಸೂರತ್, ರಾಜ್ಕೋಟ್ನ ಸ್ಥಳೀಯ ಆಡಳಿತ ಸಂಸ್ಥೆಗಳ ವಕೀಲರಿಗೆ ಪೀಠವು ಸೂಚಿಸಿದೆ. ವಿಚಾರಣೆಯನ್ನು ಸೋಮವಾರಕ್ಕೆ ನಿಗದಿ ಮಾಡಲಾಗಿದೆ.
ಈ ದುರ್ಘಟನೆಯಲ್ಲಿ 27 ಮಂದಿ ಮೃತಪಟ್ಟಿದ್ದಾರೆ.