ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಏಕಾಏಕಿ ಮಳೆ ಬೀಳುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಕೃಷಿ ಚಟುವಟಿಕೆಗಳು ಆರಂಭವಾಗಿವೆ. ಆದರೆ ಕೆಲವು ಜಿಲ್ಲೆಗಳಲ್ಲಿ ಅತಿಯಾದ ಮಳೆಯಿಂದಾಗಿ ಸಾಕಷ್ಟು ಹಾನಿ ಸಂಭವಿಸಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದ ಬಳಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಏಕನಾಥ್ ವಾಘಮೂಡೆ (55) ಹಾಗೂ ಸತೀಶ್ ಶಳಕೆ(40) ಮೃತರು.
ಇಬ್ಬರೂ ವಾಡಿ ಪಟ್ಟಣದ ರೈಲ್ವೆ ಕಾಲೋನಿಯ ನಿವಾಸಿಗಳಾಗಿದ್ದು, ಮಳೆ ಬಂದ ಹಿನ್ನೆಲೆ ಮರದಡಿ ನಿಂತಿದ್ದಾಗ ಸಿಡಿಲು ಬಡಿದು ಕೊನೆಯುಸಿರೆಳೆದಿದ್ದಾರೆ. ಈ ಕುರಿತು ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.