ದಿಗಂತ ವರದಿ ಹುಲಸೂರು
ಸುಡು ಬಿಸಿಲಿನಲ್ಲಿ ಕುಡಿಯುವ ನೀರಿಗಾಗಿ ಮಹಾರಾಷ್ಟ್ರ ಗಡಿ ಭಾಗದ ಗ್ರಾಮಸ್ಥರ ಪರದಾಡುತ್ತಿದ್ದು
ಸ್ಥಳೀಯ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ.
ಲಕ್ಷಾಂತರ ರೂ. ಖರ್ಚಾದರೂ ಶಾಶ್ವತ ಕುಡಿಯುವ ನೀರಿನ ಸಮಸ್ಯೆ ಬಗೆಹರದಿಲ್ಲ. ಗ್ರಾಮಸ್ಥರು ಕುಡಿಯುವ ನೀರಿಗಾಗಿ ಸುಡು ಬಿಸಿಲನ್ನು ಲೆಕ್ಕಿಸದೆ ಸಣ್ಣ ಮಕ್ಕಳನ್ನು ಕರೆದುಕೊಂಡು ಅಕ್ಕಪಕ್ಕದ ಹೊಲಗದ್ದೆಗಳಲ್ಲಿ ನೀರು ಸಂಗ್ರಹಿಸುವ ಕಾಯಕದಲ್ಲಿ ತೊಡಗಿದ್ದು ಸಾಮಾನ್ಯವಾಗಿ ಕಂಡು ಬಂತು. ಈ ಹಿಂದೆ ಗ್ರಾಮಸ್ಥ ಮಹಿಳೆಯರು ಗ್ರಾಮ ಪಂಚಾಯಿತಿಗೆ ಬೀಗ ಜಡೆದು ಪ್ರತಿಭಟಿಸಿದ್ದರು ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿಲ್ಲ .
ಹೌದು ಮಹಾರಾಷ್ಟ್ರ ಗಡಿ ಭಾಗದ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನ ಹೊಂದಿದ ತಾಲೂಕಿನ ಮಿರಕಲ್ ಗ್ರಾಮದ ವಾರ್ಡ್ ನಂ.3 ಮತ್ತು 4 ರಲ್ಲಿ ಕಳೆದ ಎರಡು ತಿಂಗಳಿನಿಂದ ನೀರು ಇಲ್ಲದೆ. ಸುಡು ಬಿಸಿಲನ್ನು ಲೆಕ್ಕಿಸದೆ ಒಂದು ಕೊಡ ನೀರಿಗಾಗಿ ಹೊಲ ಗದ್ದೆಯಿಂದ ನೀರು ತರಬೇಕಾದ ಪರಿಸ್ಥಿತಿ ಗ್ರಾಮಸ್ಥರಿಗೆ ಎದುರಾಗಿದೆ.
ಗ್ರಾಮದಲ್ಲಿ ಗಂಭೀರ ನೀರಿನ ಸಮಸ್ಯೆ ಉಂಟಾದರೂ ಸಹ ಚುನಾಯಿತ ಜನ ಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಅದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಎನ್ನುವ ಹಾಗೆ ಕಣ್ಣು ಮುಚ್ಚಿ ಕುಳಿತ್ತಿದ್ದಾರೆ ಹಾಗೂ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸದೆ ಕಾಲಹರಣ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದಲ್ಲಿ 10 ಸಾವಿರಕ್ಕೂ ಹೆಚ್ಚು ಜನ ವಾಸ ಮಾಡುತ್ತಿದ್ದು , ಬೆರಳೆಣಿಕೆ ಕೊಳವೆ ಬಾವಿಗಳು ಹೊರತುಪಡಿಸಿದ್ದರೆ ಉಳಿದ ಬಹುತೇಕ ಕೊಳೆವೆ ಬಾವಿಗಳು ನಾನಾ ಸಮಸ್ಯೆಗಳಿಂದ ನರಳುತ್ತಿವೆ . ಜಿಲ್ಲಾಡಳಿತ ನೀರಿನ ಸಮಸ್ಯೆ ಉಂಟಾಗದಂತೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ತಾಲೂಕಾ ಪಂಚಾಯತ್ ಇಒ ಹಾಗೂ ಗ್ರಾಮ ಪಂಚಾಯತ್ ಪಿಡಿಒ ಅವರಿಗೆ ಕಟ್ಟು ನಿಟ್ಟಿನ ಆದೇಶ ಇದ್ದರೂ ಸಹ ಗ್ರಾಮದಲ್ಲಿ ನೀರಿನ ವ್ಯವಸ್ಥೆ ಮಾಡುತ್ತಿಲ್ಲ ಎಂಬುದಕ್ಕೆ ಇದು ತಾಜಾ ಉದಾಹರಣೆ ಆಗಿದೆ.
ಗ್ರಾಪಂ ಕಾರ್ಯಾಲಯದ ಹಿಂಬದಿಯಲ್ಲಿ ಕಳೆದ ಕೆಲ ದಿನಗಳ ಹಿಂದೆ ಹೊಸ ಕೊಳೆಯ ಬಾವಿ ಕೊರಿಯಲಾಗಿದೆ. ಆದರೆ ಅದಕ್ಕೆ ವ್ಯವಸ್ಥಿತ ಮೋಟಾರ್ ಅಳವಡಿಸದೆ ನೀರು ಇದ್ದರೂ ಗ್ರಾಮ ಪಂಚಾಯಿತಿ ನಿರ್ಲಕ್ಷದಿಂದ ನೀರು ಮೇಲಕ್ಕೆ ಬರುತ್ತಿಲ್ಲ ಎಂದು ಬಡಾವಣೆಯ ಸಾರ್ವಜನಿಕರು ಗೋಳಾಡುತ್ತಿದ್ದಾರೆ.
ಗ್ರಾಪಂ ಗೆ ಬೀಗ ಹಾಕಿದ್ದರು ಸಹ ಬಗೆಹರಿಯದ ಸಮಸ್ಯೆ: ಗ್ರಾಮದಲ್ಲಿ ನೀರಿನ ಸಮಸ್ಯೆ ಉಂಟಾಗಿದೆ . ನಾವು ಬೇರೆಕಡೆಯಿಂದ ಕೆಲಸ ಬಿಟ್ಟು ನೀರು ಸಂಗ್ರಹಿಸುತಿದ್ದೇವೆ. ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಸಾಕಷ್ಟು ಸಾರಿ ಮನವರಿಕೆ ಮಾಡಿದ್ದರೂ ಸಹ ಉದ್ದೇಶಪೂರ್ವಕಾಗಿ ನಮ್ಮ ಬಡಾವಣೆಗೆ ನೀರು ಬಿಡುತ್ತಿಲ್ಲ. ಕಳೆದ ಒಂದು ವಾರದ ಹಿಂದೆ ನಾವು ಸ್ಥಳೀಯ ಗ್ರಾಮ ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟಿಸಿದ್ದರು ಸಹ ಯಾವುದೇ ಸಮಸ್ಯೆ ಬಗೆಹರಿದಿಲ್ಲ.
ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಗೆ ಒತ್ತಾಯ : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂಬ ಉದ್ದೇಶದಿಂದ ಹತ್ತಾರು ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದ್ದಾರೆ . ಆದರೆ ಮಹಾರಾಷ್ಟ್ರ ಗಡಿ ಭಾಗದ ಮಿರಕಲ್ ಗ್ರಾಮದಲ್ಲಿ ನೀರಿನ ಸಮಸ್ಯೆ ಹಾಗೆ ಉಳಿದುಕೊಂಡಿದೆ. ಇನ್ನಾದರೂ ಜಿಲ್ಲಾ ಆಡಳಿತ ಎಚ್ಚೆತ್ತು ನಮ್ಮ ಗ್ರಾಮದ ವಾರ್ಡ್ ನಂ.3 ಮತ್ತು 4 ರಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.