ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಯು ಇನ್ನಷ್ಟು ಪ್ರಬಲವಾಗಿ ಅಬ್ಬರಿಸುತ್ತಿದೆ. ಇದರಿಂದಾಗಿ ಜಿಲ್ಲೆಯಾದ್ಯಂತ ನಾಶ ನಷ್ಟಗಳು ಸಂಭವಿಸುತ್ತಿರುವ ವರದಿಗಳು ಬಂದಿದ್ದು , ಇದರೊಂದಿಗೆ ಸಾರಿಗೆ ಸಂಚಾರವೂ ಅಸ್ತವ್ಯಸ್ತಗೊಳ್ಳುತ್ತಿದೆ.
ಈ ಮಧ್ಯೆ ಹೊಸದುರ್ಗ ಅರಯಿ ವಟ್ಟತ್ತೋಡ್‌ನ ಬಾಕೋಟ್ ಹೌಸ್‌ನ ಬಿ.ಕೆ.ಅಬ್ದುಲ್ಲ ಕುಂಞಿ ಮತ್ತು ಕಂಸಿಯಾ ದಂಪತಿಯ ಪುತ್ರ, ಪ್ಲಸ್‌ವನ್ ವಿದ್ಯಾರ್ಥಿ ಬಿ.ಕೆ.ಮೊಹಮ್ಮದ್ ಸಿನಾನ್ (೧೬) ಹೊಳೆಯ ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಮೊಹಮ್ಮದ್ ಸಿನಾನ್ ತನ್ನ ಸ್ನೇಹಿತರ ಜೊತೆಗೆ ಮಂಗಳವಾರ ಸಂಜೆ ಅರಾಯಿ ಹೊಳೆಯ ಮುಳಿಯಕ್ಕಾಲ್ ಎಂಬಲ್ಲಿ ಸ್ನಾನಕ್ಕಿಳಿದಿದ್ದರು. ಈ ವೇಳೆ ಕಾಲು ಜಾರಿ ನೀರಿನ ಬಿದ್ದ ವಿದ್ಯಾರ್ಥಿಯು ಸೆಳೆತಕ್ಕೆ ಕೊಚ್ಚಿ ಹೋಗಿ ನಾಪತ್ತೆಯಾದರು. ಬಳಿಕ ಊರವರು ಮತ್ತು ಅಗ್ನಿಶಾಮಕ ದಳದವರು ನಡೆಸಿದ ವ್ಯಾಪಕ ಕಾರ್ಯಾಚರಣೆಯಲ್ಲಿ ಅಲ್ಲೇ ಪಕ್ಕದ ಹೊಳೆ ನೀರಿನಲ್ಲಿ ಪತ್ತೆಹಚ್ಚಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.
ಕಣ್ಣೂರು ವೆಟ್ಟಿಕುಳ ಸಹಬ ಇಸ್ಲಾಮಿಕ್ ಅಕಾಡೆಮಿಯ ಪ್ಲಸ್‌ವನ್ ವಿದ್ಯಾರ್ಥಿಯಾಗಿರುವ ಮೊಹಮ್ಮದ್ ಸಿನಾನ್ ಹೆತ್ತವರ ಹೊರತಾಗಿ ಸಹೋದರಿಯರಾದ ಹರ್ಷಾನಾ, ಅಫ್ರೀನಾ ಅವರನ್ನು ಅಗಲಿದ್ದಾರೆ. ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ತೆಂಗನ ಮರ ಮಗುಚಿ ಬಿದ್ದು ವಿದ್ಯುತ್ ಕಂಬಕ್ಕೆ ಹಾನಿ
ಮಂಗಳವಾರ ಸಂಜೆ ಬೀಸಿದ ಬಿರುಗಾಳಿ ಹಾಗೂ ಮಳೆಗೆ ತೆಂಗಿನ ಮರವೊಂದು ಮಗುಚಿ ವಿದ್ಯುತ್ ತಂತಿ ಮೇಲೆ ಬಿದ್ದ ಘಟನೆ ಕುಂಬಳೆ ಸಿಎಚ್‌ಸಿ ಮಾಟೆಂಗುಳಿ ರಸ್ತೆಯಲ್ಲಿ ನಡೆದಿದೆ. ಮರ ಬಿದ್ದ ಹಿನ್ನೆಲೆಯಲ್ಲಿ ವಿದ್ಯುತ್ ಕಂಬವು ವಾಲಿ ನಿಂತಿದ್ದು , ತಂತಿಗಳು ತುಂಡಾಗಿ ನೇತಾಡುತ್ತಿದ್ದವು. ಇದರಿಂದಾಗಿ ಮಾಟೆಂಗುಳಿ ಭಾಗಕ್ಕಿರುವ ವಿದ್ಯುತ್ ಪೂರೈಕೆಯು ಪೂರ್ಣವಾಗಿ ಮೊಟಕುಗೊಂಡಿತು. ನಂತರ ವಿದ್ಯುತ್ ಇಲಾಖೆಯ ಅಕಾರಿಗಳು ಆಗಮಿಸಿ ಬೇರೆ ಕಂಬ ಸ್ಥಾಪಿಸಿದ ನಂತರವಷ್ಟೇ ವಿದ್ಯುತ್ ಸರಬರಾಜು ಸಾಧ್ಯವಾಯಿತು. ತೆಂಗಿನ ಮರ ಮಗುಚಿ ಬೀಳುವ ಸಂದರ್ಭ ಪರಿಸರದಲ್ಲಿ ಯಾರೂ ಇಲ್ಲದ ಕಾರಣ ಸಂಭವನೀಯ ದುರಂತ ತಪ್ಪಿಹೋಯಿತು.