ಶತ್ರುಗಳ ವಿರುದ್ಧ ಹೋರಾಡಲು ಮತ್ತೊಂದು ಕ್ಷಿಪಣಿ: ‘ರುದ್ರಂ II’ ಪ್ರಯೋಗ ಸಕ್ಸಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ದೇಶೀಯವಾಗಿ ನಿರ್ಮಿಸಿದ, ಆ್ಯಂಟಿ-ರೇಡಿಯೇಷನ್‌ ಸಾಮರ್ಥ್ಯ (ವೈರಿಗಳ ರೇಡಾರ್‌, ಜಾಮರ್‌ ಹಾಗೂ ರೇಡಿಯೊಗಳನ್ನು ಗುರುತಿಸಿ, ಅವುಗಳನ್ನು ನಾಶಪಡಿಸುವ ಸಾಮರ್ಥ್ಯ) ಹೊಂದಿರುವ ರುದ್ರಂ II (Rudram II) ಕ್ಷಿಪಣಿಯ ಪ್ರಯೋಗಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ನಡೆದಿದೆ.

ಈ ಮೂಲಕ ದೇಶದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (DRDO) ಹೊಸ ಮೈಲುಗಲ್ಲು ಸ್ಥಾಪಿಸಿದೆ.

ಒಡಿಶಾದ (Odisha) ಕರಾವಳಿ ಪ್ರದೇಶದಿಂದ ನಡೆಸಿದ ಪ್ರಯೋಗಾರ್ಥ ಉಡಾವಣೆಯು ಯಶಸ್ವಿಯಾಗಿದೆ.

ಭಾರತೀಯ ವಾಯುಪಡೆಯ ಸುಖೋಯ್-‌30 ಎಂಕೆ-I (Su-30 MK-I) ಯುದ್ಧವಿಮಾನದ ಮೂಲಕ ಏರ್‌ ಟು ಸರ್ಫೆಸ್‌ ದಾಳಿಯ ದಕ್ಷತೆ ಹೊಂದಿರುವ (Air To Surface- ಯುದ್ಧವಿಮಾನದಿಂದ ಕ್ಷಿಪಣಿ ದಾಳಿ ನಡೆಸಿ ಭೂಮಿ ಹಾಗೂ ಸಾಗರದಲ್ಲಿರುವ ಶತ್ರುಗಳನ್ನು ಹೊಡೆದುರುಳಿಸುವ ಸಾಮರ್ಥ್ಯ) ಕ್ಷಿಪಣಿಯನ್ನು ಪ್ರಯೋಗಕ್ಕೆ ಒಳಪಡಿಸಲಾಗಿದೆ.

ಗಡಿ ಹಾಗೂ ಸಮುದ್ರ ಪ್ರದೇಶದಲ್ಲಿ ಭಾರತದ ಮೇಲೆ ದಾಳಿ ನಡೆಸುವ, ಆಕ್ರಮಣಕಾರಿ ನೀತಿ ಅನುಸರಿಸುವ ಚೀನಾ ಹಾಗೂ ಪಾಕಿಸ್ತಾನಕ್ಕೆ ತಿರುಗೇಟು ನೀಡಲು ಸಂಪೂರ್ಣ ದೇಶೀಯವಾಗಿಯೇ ತಯಾರಿಸಿದ ರುದ್ರಂ II ಕ್ಷಿಪಣಿಯು ಪ್ರಮುಖ ಅಸ್ತ್ರವಾಗಿದೆ. ಸುಮಾರು 100 ಕಿಲೋಮೀಟರ್‌ ದೂರದಲ್ಲಿರುವ ಶತ್ರುಗಳ ರೇಡಾರ್‌ ಸಿಸ್ಟಮ್‌ಗಳು, ರೇಡಿಯೊಗಳು ಸೇರಿ ಯಾವುದೇ ಸಂವಹನ ಸಾಧನಗಳನ್ನು ಟ್ರ್ಯಾಕ್‌ ಮಾಡುವ ಸಾಮರ್ಥ್ಯವನ್ನು ಇದು ಹೊಂದಿದೆ. ಆಗಸದಿಂದಲೇ ಸಮುದ್ರ ಹಾಗೂ ಭೂಮಿ ಮೇಲಿನ ವೈರಿಗಳನ್ನು ಹೊಡೆದುರುಳಿಸುವ ದಕ್ಷತೆ ಹೊಂದಿದೆ. ಹಾಗಾಗಿ ಕ್ಷಿಪಣಿ ಪ್ರಯೋಗದ ಯಶಸ್ಸು ಒಂದು ಮೈಲುಗಲ್ಲು ಎಂದೇ ವಿಶ್ಲೇಷಿಸಲಾಗುತ್ತಿದೆ.

ರಾಜನಾಥ್‌ ಸಿಂಗ್‌ ಅಭಿನಂದನೆ
ರುದ್ರಂ II ಕ್ಷಿಪಣಿಯ ಯಶಸ್ವಿ ಪ್ರಯೋಗಕ್ಕೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅಭಿನಂದನೆ ಸಲ್ಲಿಸಿದ್ದಾರೆ. “ರುದ್ರಂ II ಕ್ಷಿಪಣಿಯನ್ನು ಡಿಆರ್‌ಡಿಒ ಯಶಸ್ವಿಯಾಗಿ ಪ್ರಯೋಗಕ್ಕೆ ಒಳಪಡಿಸಿದೆ. ಇದಕ್ಕಾಗಿ ಡಿಆರ್‌ಡಿಒ, ವಾಯುಪಡೆಗೆ ಅಭಿನಂದನೆಗಳು. ಕ್ಷಿಪಣಿಯಿಂದ ಭಾರತೀಯ ಸೇನೆಗೆ ಭೀಮಬಲ ಸಿಕ್ಕಂತಾಗಲಿದೆ” ಎಂಬುದಾಗಿ ರಾಜನಾಥ್‌ ಸಿಂಗ್‌ ಹೇಳಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಕಚೇರಿಯು ಟ್ವೀಟ್‌ ಮಾಡಿದೆ. ಡಿಆರ್‌ಡಿಒ ಸಾಧನೆಗೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!