ದಿಗಂತ ವರದಿ ಶಿವಮೊಗ್ಗ :
ವಾಲ್ಮೀಕಿ ಅಭಿವೃದ್ಧಿ ನಿಗಮದ ಲೆಕ್ಕಾಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣವನ್ನು ತಕ್ಷಣ ಸಿಬಿಐಗೆ ವಹಿಸಿ ತನಿಖೆ ನಡೆಬೇಕು. ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜೇಂದ್ರ ಆಗ್ರಹಿಸಿದರು.
ಗುರುವಾರ ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕುಟುಂಬ ಆರ್ಥಿಕವಾಗಿ ಜರ್ಜಿತವಾಗಿರುವುದರಿಂದ ತಕ್ಷಣ 25 ಲಕ್ಷ ರೂ. ಪರಿಹಾರ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.
ರಾಜ್ಯ ಸರ್ಕಾರ ಬಂಡತನ ಪ್ರದರ್ಶನ ಮಾಡದೆ ತಕ್ಷಣ ಸಚಿವರ ರಾಜೀನಾಮೆ ಪಡೆದು ತನಿಖೆ ನಡೆಸಬೇಕು. ಇದಕ್ಕೆ ಒಂದು ವಾರದ ಗಡುವು ನೀಡುತ್ತಿದ್ದು, ಕ್ರಮ ಕೈಗೊಳ್ಳದಿದ್ದರೆ ಪಕ್ಷದ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.
ನಿಗಮದಲ್ಲಿ ಅವ್ಯವಹಾರ ನಡೆದಿರುವುದು ಸ್ಪಷ್ಟವಾಗಿದೆ. ಇದರಲ್ಲಿ ಮೂವರ ಪಾತ್ರ ಮಾತ್ರವಲ್ಲ. ಇತರೆ ಅಧಿಕಾರಿಗಳು, ಸಚಿವರ ಪಾತ್ರವೂ ಇದೆ. ಬ್ಯಾಂಕ್ ಅಧಿಕಾರಿಗಳ ಪಾತ್ರವೂ ಇದೆ. ಚುನಾವಣೆ ಉದ್ದೇಶಕ್ಕಾಗಿ ಇಲ್ಲಿಂದ ಹಣ ತೆಲಂಗಾಣಕ್ಕೆ ಹೋಗಿರುವುದು ಸ್ಪಷ್ಟವಾಗಿದೆ. ಕರ್ನಾಟಕವನ್ನು ಎಟಿಎಂ ಆಗಿ ಬಳಕೆ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ. ಈ ಬಗ್ಗೆಯೂ ಹೇಳಿದರೆ ದಾಖಲೆ ನೀಡುವಂತೆ ಸಿಎಂ, ಡಿಸಿಎಂ ಹೇಳಿದ್ದರು. ಈಗ ಯಾವ ದಾಖಲೆ ಬೇಕೆಂದು ಪ್ರಶ್ನಿಸಿದರು.