ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಂಭ್ರಮಾಚರಣೆ ನಡೆಯುತ್ತಿದೆ.
ಮಾರ್ಚ್ ಆರಂಭದಲ್ಲಿ ಗುಜರಾತ್‌ನ ಜಾಮ್‌ನಗರದಲ್ಲಿವಿವಾಹಪೂರ್ವ ಕಾರ್ಯಕ್ರಮದ 1ನೇ ಸುತ್ತನ್ನು ಆಯೋಜಿಸಿದ್ದರೆ, 2ನೇ ಸುತ್ತನ್ನು ಇಟಲಿಯಲ್ಲಿ ಕ್ರೂಸ್‌ನಲ್ಲಿ ಆಯೋಜಿಸಲಾಗಿದೆ.
ಈ ನಡುವೆ ಅನಂತ್-ರಾಧಿಕಾ ಮದುವೆಯ ಆಮಂತ್ರಣ ಪತ್ರಿಕೆಯೂ ಹೊರಬಿದ್ದಿದೆ.
ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಅದ್ಧೂರಿ ವಿವಾಹ ನಡೆಯಲಿದೆ. ಜುಲೈ 12ರಂದು ಜೋಡಿ ವಿವಾಹವಾಗಲಿದ್ದಾರೆ. ಅತಿಥಿಗಳು ಆಮಂತ್ರಣ ಕಾರ್ಡ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸಿದ್ದಾರೆ. ಅನಂತ್-ರಾಧಿಕಾ ಮದುವೆ ಕಾರ್ಡ್ ಸಾಂಪ್ರದಾಯಿಕ ಕೆಂಪು ಮತ್ತು ಗೋಲ್ಡನ್ ಬಣ್ಣದ್ದಾಗಿದೆ. ಇವರಿಬ್ಬರ ವಿವಾಹ ಕಾರ್ಯಕ್ರಮದ ವಿವರಗಳನ್ನೂ ಕಾರ್ಡ್‌ನಲ್ಲಿ ನೀಡಲಾಗಿದೆ.
ಮದುವೆ ಸಂಭ್ರಮದ ಕಾರ್ಯಕ್ರಮಗಳು (ಜು.12 ರಿಂದ 14) ಮೂರು ದಿನಗಳ ಕಾಲ ಜರುಗಲಿವೆ. ಜು.12 ರಂದು ಶುಭ ವಿವಾಹದೊಂದಿಗೆ ಕಾರ್ಯಕ್ರಮಗಳು ನಡೆಯಲಿವೆ. ಜು.13 ರ ಶನಿವಾರ ಶುಭ ಆಶೀರ್ವಾದ ಅಥವಾ ದೈವಿಕ ಆಶೀರ್ವಾದ ಕಾರ್ಯಕ್ರಮ ಇರಲಿದೆ. ಜು.14ರ ಭಾನುವಾರದಂದು ಅದ್ಧೂರಿ ವಿವಾಹ ಆರತಕ್ಷತೆ ನಡೆಯಲಿದೆ ಎಂದು ವರದಿಯಾಗಿದೆ.
ಈ ಆಮಂತ್ರಣದ ಬೆನ್ನಲ್ಲೇ ಅಧಿಕೃತ ಆಮಂತ್ರಣ ಬರಲಿದೆ ಎಂದೂ ಹೇಳಲಾಗಿದೆ.