ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಕಣ್ಣೂರು ತಳಿಪರಂಬ ರಾಜರಾಜೇಶ್ವರ ದೇವಸ್ಥಾನದ ಸಮೀಪದಲ್ಲಿ ಪ್ರಾಣಿಬಲಿ ನೀಡಿ ಶತ್ರು ಭೈರವಿ ಯಾಗ ಮಾಡಲಾಗಿದೆ ಎಂಬ ಡಿಕೆ ಶಿವಕುಮಾರ್ ಹೇಳಿಕೆಯನ್ನು ದೇವಸ್ಥಾನದ ಆಡಳಿತ ಮಂಡಳಿ ತಳ್ಳಿಹಾಕಿದೆ.
ದೇವಸ್ವಂ ಟ್ರಸ್ಟಿ ಮಂಡಳಿ ಸದಸ್ಯ ಮಾಧವನ್ ಪ್ರತಿಕ್ರಿಯಿಸಿ, ಯಾವುದೇ ದೇವಾಲಯವನ್ನು ಕೊಲ್ಲುವ ಶತ್ರು-ಸಂಹಾರ ಪೂಜೆ ಅಥವಾ ಪ್ರಾಣಿ ಬಲಿ ದೇವಾಲಯದಲ್ಲಿ ಅಥವಾ ದೇವಾಲಯದ ಸುತ್ತಲೂ ನಡೆದಿರುವುದು ತಿಳಿದಿಲ್ಲ. ಅವರು ಹೇಳಿದಂತೆ ಮೇಕೆ, ಎಮ್ಮೆಗಳನ್ನು ಕಡಿಯಲಾಗಿದೆ ಎಂಬ ಹೇಳಿಕೆ ನೂರಕ್ಕೆ 100% ರಷ್ಟು ಸುಳ್ಳು ಎಂದಿದ್ದಾರೆ.
ತಳಿಪರಂಬ ಪ್ರದೇಶದಲ್ಲಿ ಇಂತಹ ಚಟುವಟಿಕೆಗಳು ಗೌಪ್ಯವಾಗಿ ನಡೆಯಲು ಸಾಧ್ಯವಿಲ್ಲ . ದೇವಸ್ಥಾನದ ಆವರಣದಲ್ಲಿದೆ ಎಂದು ಹೇಳಿ ದೇವಸ್ಥಾನದ ಹೆಸರನ್ನು ಎಳೆದು ತಂದಿರುವುದು ನಿರಾಸೆ ತಂದಿದೆ ಎಂದಿದ್ದಾರೆ.
ರಾಜರಾಜೇಶ್ವರ ದೇವಸ್ಥಾನದಲ್ಲಿ ಶತ್ರು ಸಂಹಾರ ಪೂಜೆ ಇಲ್ಲ. ಕ್ಷೇತ್ರದ ಅಕ್ಕಪಕ್ಕದಲ್ಲಿ ಮೇಕೆ, ಕೋಣವನ್ನು ಬಲಿ ಕೊಟ್ಟಿದ್ದಾರೆ ಎನ್ನುವುದೂ ಸರಿಯಲ್ಲ. ನಾವು ಈ ಬಗ್ಗೆ ಪರಿಶೀಲನೆ ಮಾಡಿದ್ದೇವೆ. ಯಾರಿಗೂ ಗೊತ್ತಾಗದಂತೆ ತಳಿಪರಂಬ ಪ್ರದೇಶದಲ್ಲಿ ಯಾಗ ನಡೆಸಲು ಸಾಧ್ಯವಿಲ್ಲ. ಇದು ನಿರಾಶಾದಾಯಕ ಹೇಳಿಕೆ.
ಈ ದೇವಸ್ಥಾನದಲ್ಲಿ ಈ ರೀತಿಯ ಪೂಜೆ ನಡೆಯುವುದಿಲ್ಲ. ಇಲ್ಲಿ ಬ್ರಾಹ್ಮಣರು ಮಾತ್ರ ಪೂಜೆ ನಡೆಸುವ ಕ್ಷೇತ್ರವಾಗಿದೆ. ರಾಜರಾಜೇಶ್ವರ ದೇಗುಲದಲ್ಲಿ ಶತ್ರು ಭೈರವ ಯಾಗ ಸೇವೆಯೇ ಇಲ್ಲ. ಮಲಬಾರಂ ದೇವಸ್ವಂ ಬೋರ್ಡ್ ಅಡಿ ಬರುವ ಯಾವ ದೇಗುಲದಲ್ಲೂ ಬಲಿ ಕೊಡುವುದಿಲ್ಲ. ಡಿಕೆಶಿ ಹೇಳಿಕೆ ದೌರ್ಭಾಗ್ಯಕರ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.
ಕೇರಳ ಸರ್ಕಾರ ಕೂಡ ಡಿಕೆಶಿ ಆರೋಪ ನಿರಾಕರಿಸಿದ್ದು,ಡಿಕೆಶಿ ಆರೋಪ ಮಾಡಿದಂತೆ ಕೇರಳದಲ್ಲಿ ನಡೆದಿರಲು ಸಾಧ್ಯವಿಲ್ಲ. ಕೇರಳದಲ್ಲಿ ನಡೆಯಲು ಸಾಧ್ಯತೆ ಇಲ್ಲದ ಘಟನೆ ಇದು. ಆದರೂ ಇದರ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಕೇರಳದ ದೇವಸ್ವಂ ಸಚಿವ ಕೆ.ರಾಧಾಕೃಷ್ಣನ್ ತಿಳಿಸಿದ್ದಾರೆ.