ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆ.ಆರ್ ನಗರದ ಸಂತ್ರಸ್ತ ಮಹಿಳೆಯ ಕಿಡ್ನಾಪ್ ಕೇಸಿನಲ್ಲಿ ಭವಾನಿ ರೇವಣ್ಣ ಅವರ ವಿಚಾರಣೆಗಾಗಿ ಹೊಳೆನರಸೀಪುರದ ಅವರ ಮನೆಗೆ ಎಸ್ಐಟಿ (SIT) ಟೀಮ್ ಆಗಮಿಸಿದ್ದು, ಆದ್ರೆ ಭವಾನಿ ಅವರು ಮನೆಯಲ್ಲಿಲ್ಲ, ಎಲ್ಲಿ ಹೋಗಿದ್ದಾರೆ ಎಂಬ ಸುಳಿವನ್ನೂ ನೀಡಿಲ್ಲ.
ಹೊಳೆನರಸೀಪುರದ ಚೆನ್ನಾಂಬಿಕಾ ನಿವಾಸದಲ್ಲಿ ತನಿಖೆಗೆ ತಾನು ಲಭ್ಯ ಇರುತ್ತೇನೆ ಎಂದು ತಿಳಿಸಿದ್ದ ಭವಾನಿ, ಮಧ್ಯಾಹ್ನ ಎರಡು ಗಂಟೆಯಾದರೂ ವಿಚಾರಣೆಗೆ ಹಾಜರಾಗಲಿಲ್ಲ.
ವಿಚಾರಣೆಗಾಗಿ ಬಂದ ಎಸ್ಐಟಿ ಅಧಿಕಾರಿಗಳು ಮನೆಯ ಆವರಣದಲ್ಲೇ ಜೀಪ್ನಲ್ಲಿ ಕಾದು ಕುಳಿತರು.
ಮನೆಯ ನೆಲಮಾಳಿಗೆಯಲ್ಲಿ ಭವಾನಿ ಅವರ ಕಾರು ನಿಂತಿದ್ದು, ಕಾರನ್ನು ಮನೆಯಲ್ಲೇ ಬಿಟ್ಟು ಭವಾನಿ ತೆರಳಿದ್ದಾರೆ. KA-05-AL-8055 (BOSS) ನಂಬರ್ನ ಕಿಯಾ ಕಾರ್ನಿವಲ್ ಕಾರನ್ನು ಮನೆಯ ನೆಲಮಾಳಿಗೆಯಲ್ಲಿ ಪ್ರಜ್ವಲ್ ರೇವಣ್ಣ ಅವರ ಕಾರಿನ ಪಕ್ಕದಲ್ಲೇ ನಿಲ್ಲಿಸಲಾಗಿದೆ.
ನಿನ್ನೆ ಕಿಡ್ನಾಪ್ ಕೇಸ್ನಲ್ಲಿ ಭವಾನಿ ಅವರ ಜಾಮೀನು ಅರ್ಜಿ ವಜಾ ಆಗಿತ್ತು. ಹೀಗಾಗಿ ಇವತ್ತೋ ನಾಳೆಯೋ ಭವಾನಿ ಬಂಧನ ಆಗುವುದು ಖಚಿತವಾಗಿದೆ. ಹೀಗಾಗಿ ಎಸ್ಐಟಿ ಮುಂದೆ ಬಾರದೆ ತಪ್ಪಿಸಿಕೊಂಡಿದ್ದಾರೆ. ಬಂಧನ ಭೀತಿಯಿಂದ ವಿಚಾರಣೆಗೆ ಗೈರುಹಾಜರಾಗಿದ್ದಾರೆ ಎಂದು ಭಾವಿಸಲಾಗಿದೆ. ಭವಾನಿಗಾಗಿ ಸಂಜೆ 5 ಗಂಟೆಯವರೆಗೂ ಎಸ್ಐಟಿ ತಂಡ ಕಾಯಲಿದೆ ಎಂದು ತಿಳಿದುಬಂದಿದೆ.