ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಗೆ ಮೇ 10 ರಂದು ಸುಪ್ರೀಂ ಕೋರ್ಟ್ 21 ದಿನಗಳ ಮಧ್ಯಂತರ ಜಾಮೀನು ನೀಡಿತ್ತು.ಜೊತೆಗೆ ಜೂನ್ 2 ರಂದು ಶರಣಾಗಬೇಕು ಎಂದು ನಿರ್ದೇಶಿಸಿದೆ.
ಇದೀಗ ಇದರ ನಡುವೆ ಕೇಜ್ರಿವಾಲ್ ಅವರ ಆರೋಗ್ಯ ಸರಿಯಾಗಿಲ್ಲ ಎನ್ನಲಾಗಿದೆ. ತಾನು ಕೆಲವು ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದೇನೆ ಎಂದು ಮಧ್ಯಂತರ ಜಾಮೀನು ಅವಧಿಯನ್ನು ವಿಸ್ತರಿಸಬೇಕು ಎಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ .
ಹೀಗಾಗಿ ಕೇಜ್ರಿವಾಲ್ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲು ಹಿರಿಯ ಬಿಜೆಪಿ ನಾಯಕ ವಿಜಯ್ ಗೋಯೆಲ್ ಇಂದು ಆಂಬುಲೆನ್ಸ್ ಕಳುಹಿಸಿದ್ದಾರೆ.
ಕೇಜ್ರಿವಾಲ್ ಅವರು ಪಿಇಟಿ-ಸಿಟಿ ಸ್ಕ್ಯಾನ್ ಸೇರಿದಂತೆ ಕೆಲವು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಬೇಕು ಎಂಬ ಕಾರಣಕ್ಕಾಗಿ ತಮ್ಮ ಮಧ್ಯಂತರ ಜಾಮೀನನ್ನು 7 ದಿನಗಳವರೆಗೆ ವಿಸ್ತರಿಸಬೇಕೆಂದು ಕೋರಿ ಮೇ 26ರಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನಾನು ಜೈಲಿನಲ್ಲಿ 7 ಕೆಜಿ ತೂಕವನ್ನು ಕಳೆದುಕೊಂಡಿದ್ದೇನೆ ಮತ್ತು ನನ್ನ ಕೀಟೋನ್ ಮಟ್ಟಗಳು ತುಂಬಾ ಹೆಚ್ಚಾಗಿದೆ. ಜೈಲಿನಲ್ಲಿ ನನಗೆ ನನ್ನ ಮಾತ್ರೆಗಳನ್ನು ತೆಗೆದುಕೊಳ್ಳಲು ಸರಿಯಾಗಿ ಅವಕಾಶ ನೀಡುತ್ತಿರಲಿಲ್ಲ ಎಂದು ಅವರು ತಮ್ಮ ಮನವಿಯಲ್ಲಿ ಹೇಳಿಕೊಂಡಿದ್ದರು.
ಕೇಜ್ರಿವಾಲ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಬಿಜೆಪಿ ನಾಯಕ ಗೋಯೆಲ್ ಅವರು, ಇಲ್ಲಿನ ಸಿವಿಲ್ ಲೈನ್ಸ್‌ನಲ್ಲಿರುವ ಮುಖ್ಯಮಂತ್ರಿಯವರ ಅಧಿಕೃತ ನಿವಾಸಕ್ಕೆ ಆಂಬ್ಯುಲೆನ್ಸ್ ತೆಗೆದುಕೊಂಡು ಹೋಗಿದ್ದಾರೆ. ಆದರೆ ಪೊಲೀಸರು ಮಾರ್ಗಮಧ್ಯೆ ಆಂಬ್ಯುಲೆನ್ಸ್ ಮತ್ತು ಗೋಯೆಲ್ ಅವರನ್ನು ತಡೆದರು.
ಜನರ ಸಹಾನುಭೂತಿ ಗಳಿಸಲು ಕೇಜ್ರಿವಾಲ್ ಅವರು ಆರೋಗ್ಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ನಾಟಕವಾಡುತ್ತಿದ್ದಾರೆ ಎಂದು ಗೋಯಲ್ ಆರೋಪಿಸಿದ್ದಾರೆ. “ಈ ಆಂಬ್ಯುಲೆನ್ಸ್ ಕೇಜ್ರಿವಾಲ್ ಅವರನ್ನು ಯಾವುದೇ ಆಸ್ಪತ್ರೆಗೆ ಬೇಕಾದರೂ ಕರೆದೊಯ್ಯಲಿದೆ. ಅಲ್ಲಿ ಅವರ ಎಲ್ಲಾ ಪರೀಕ್ಷೆಗಳನ್ನು ಎರಡರಿಂದ ನಾಲ್ಕು ಗಂಟೆಗಳ ಒಳಗೆ ಮಾಡಿಸಿಕೊಳ್ಳಬಹುದು” ಎಂದು ಗೋಯೆಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳು ‘ನಾಟಕ’ವನ್ನು ನಿಲ್ಲಿಸಬೇಕು ಮತ್ತು ಅವರ ಆರೋಗ್ಯದ ಬಗ್ಗೆ ಕಾಳಜಿ ಇದ್ದರೆ ತಮ್ಮೊಂದಿಗೆ ಪರೀಕ್ಷೆಗೆ ಬರಬೇಕು ಎಂದು ಮಾಜಿ ಕೇಂದ್ರ ಸಚಿವರು ಹೇಳಿದ್ದಾರೆ.