ಲೋಕಸಭೆ ಚುನಾವಣೆಯ 7 ಹಂತಗಳ ಮತದಾನ ಮುಕ್ತಾಯ: ಜೂನ್ 4ರಂದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಪ್ರಜಾಪ್ರಭುತ್ವದ ಹಬ್ಬ ಲೋಕಸಭೆ ಚುನಾವಣೆ ಮುಕ್ತಾಯವಾಗಿದೆ. ಸುದೀರ್ಘ 7 ಹಂತಗಳಲ್ಲಿ ಮತದಾನ ಶಾಂತಿಯುತವಾಗಿ ನಡೆಯಿತು.

ಏಪ್ರಿಲ್ 19 ರಿಂದ ಜೂನ್ 1ರವರೆಗೆ 7 ಹಂತಗಳಲ್ಲಿ ಮತದಾನ ನಡೆದಿದ್ದು, ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ.

ಪ್ರಮುಖವಾಗಿ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರದಲ್ಲಿ 7 ಹಂತಗಳಲ್ಲಿ ಮತದಾನ ನಡೆದಿತ್ತು. ಮಹಾರಾಷ್ಟ್ರ ಮತ್ತು ಜಮ್ಮು -ಕಾಶ್ಮೀರದಲ್ಲಿ ಐದು ಹಂತ, ಮಧ್ಯಪ್ರದೇಶ, ಒಡಿಶಾ, ಜಾರ್ಖಂಡ್ ನಲ್ಲಿ 4 ಹಂತ, ಕರ್ನಾಟಕದಲ್ಲಿ ಎರಡು ಹಂತದಲ್ಲಿ ಲೋಕಸಭೆ ಚುನಾವಣೆಗೆ ಮತದಾನ ನಡೆದಿತ್ತು. ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 7 ರಂದು ಎರಡು ಹಂತಗಳಲ್ಲಿ ಮತದಾನ ನಡೆದಿತ್ತು.

10.54 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.  1.5 ಕೋಟಿ ಚುನಾವಣಾ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಯನ್ನು ಬಳಕೆ ಮಾಡಿಕೊಂಡಿದ್ದು, ದೇಶಾದ್ಯಂತ 55 ಲಕ್ಷ ಇವಿಎಂ ಬಳಸಲಾಗಿದೆ. ಚುನಾವಣಾ ಪ್ರಕ್ರಿಯೆಗಾಗಿ ಸುಮಾರು 4 ಲಕ್ಷಗಳ ವಾಹನ ಬಳಕೆಯಾಗಿದೆ. ಇಡೀ ವಿಶ್ವವೇ ಅತ್ಯಂತ ಕುತೂಹಲದಿಂದ ಭಾರತದ ಚುನಾವಣೆಯನ್ನು ಗಮನಿಸಿದೆ.

ಮೊದಲ ಹಂತದ ಮತದಾನವು ಏಪ್ರಿಲ್ 19 ರಂದು ನಡೆಯಿತು, ಇದರಲ್ಲಿ 102 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಎರಡನೇ ಹಂತದಲ್ಲಿ ಏಪ್ರಿಲ್ 26 ರಂದು 88 ಸ್ಥಾನಗಳಲ್ಲಿ ಮತದಾರರು ತಮ್ಮ ಹಕ್ಕುಗಳನ್ನು ಚಲಾಯಿಸಿದ್ದರು. 11 ರಾಜ್ಯಗಳಲ್ಲಿ 93 ಸ್ಥಾನಗಳೊಂದಿಗೆ ಮೂರನೇ ಹಂತದ ಮತದಾನವು ಮೇ 7 ರಂದು, ಮೇ 13 ರಂದು ನಾಲ್ಕನೇ ಹಂತ, ಮೇ 20ರಂದು 5ನೇ ಹಂತ, ಮೇ 25 ರಂದು 6ನೇ ಹಂತ ಪೂರ್ಣಗೊಂಡಿತ್ತು. ಎಲ್ಲಾ ಸ್ಥಾನಗಳ ಫಲಿತಾಂಶಗಳನ್ನು ಜೂನ್ 4 ರಂದು ಘೋಷಿಸಲಾಗುತ್ತದೆ.

ಮೊದಲ ಹಂತದಲ್ಲಿ ಶೇ.66.14ರಷ್ಟು ಮತದಾನವಾಗಿದ್ದು, ಎರಡನೇ ಹಂತದಲ್ಲಿ ಶೇ.66.71ರಷ್ಟು ಮತದಾನವಾಗಿದೆ. ಮೂರನೇ, ನಾಲ್ಕನೇ, ಐದನೇ ಮತ್ತು ಆರನೇ ಹಂತಗಳಲ್ಲಿ ಕ್ರಮವಾಗಿ ಶೇ.65.68, ಶೇ.69.16, ಶೇ.62.20 ಮತ್ತು ಶೇ.63.37ರಷ್ಟು ಮತದಾನವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!