ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಧೀಕ್ಷಕರ ಸಾವು ಮತ್ತು ಕೋಟ್ಯಂತರ ರೂ. ವಂಚನೆ ಪ್ರಕರಣ ಸಂಬಂಧ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ್ ಹಾಗೂ ಲೆಕ್ಕಾಧಿಕಾರಿ ಪರಶುರಾಮ್ ಅವರನ್ನು ಬಂಧಿಸಲಾಗಿತ್ತು. ಇದೀಗ ಬಂಧಿತರನ್ನು 6 ದಿನ SIT ಕಸ್ಟಡಿಗೆ ನೀಡಿ ಬೆಂಗಳೂರಿನ 3ನೇ ಎಸಿಎಂಎಂ ಕೋರ್ಟ್ ಆದೇಶ ಹೊರಡಿಸಿದೆ.
ಹಗರಣ ಬಯಲಿಗೆ ಬಂದ ಬಳಿಕ ಇಬ್ಬರೂ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿತ್ತು. ಬ್ಯಾಂಕ್ ಅಧಿಕಾರಿಗಳ ವಿರುದ್ಧವು ಎಫ್ಐಆರ್ ದಾಖಲಾಗಿತ್ತು. ಯೂನಿಯನ್ ಬ್ಯಾಂಕ್ನ ಎಂಡಿ ಹಾಗೂ ಸಿಇಓ ಮಣಿಮೇಘಲೈ, ಕಾರ್ಯನಿರ್ವಾಹಕ ನಿರ್ದೇಶಕ ನಿತೇಶ್ ರಂಜನ್, ರಾಮ ಸುಬ್ರಮಣ್ಯಂ ಸೇರಿ 6 ಮಂದಿ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ FIR ದಾಖಲಿಸಲಾಗಿತ್ತು.
ಬೆಂಗಳೂರಿನ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿಯಲ್ಲಿ ಅಧೀಕ್ಷ ಚಂದ್ರಶೇಖರ್ ಇತ್ತೀಚೆಗೆ ರಾತ್ರಿ ಶಿವಮೊಗ್ಗದ ವಿನೋಬನಗರದ ಕೆಂಚಪ್ಪ ಲೇಚೌಟ್ ನಲ್ಲಿ ನೇಣಿಗೆ ಶರಣಾಗಿದ್ದರು. ನೇಣಿಗೂ ಮೊದಲು ಚಂದ್ರಶೇಖರ್ ಆರು ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದರು. 187.33 ಕೋಟಿ ರೂ. ನಿಗಮ ಅನುದಾನದಲ್ಲಿ 80 ರಿಂದ 85 ಕೋಟಿ ರೂ. ಅವ್ಯವಹಾರ ಆಗಿದೆ.