ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿಯ ಲೋಕಸಭಾ ಚುನಾವಣೆಯ 7ನೇ ಹಂತದ ಮತದಾನ ಮುಗಿಯುತ್ತಿದ್ದಂತೆ , ಹೊರಬಿದ್ದಿರುವ ಮತದಾನೋತ್ತರ ಸಮೀಕ್ಷೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ 3ನೇ ಬಾರಿಗೆ ಅಧಿಕಾರಕ್ಕೆ ಬರುವ ಮೂಲಕ ಹ್ಯಾಟ್ರಿಕ್ ಸಾಧಿಸಲಿದೆ .
ಬಿಜೆಪಿ ನೇತೃತ್ವದ ಎನ್‌ಡಿಎ 350 ಸ್ಥಾನಗಳನ್ನು ದಾಟಲಿದ್ದು, ಕಾಂಗ್ರೆಸ್ ನೇತೃತ್ವದ I.N.D.I.A ಕೂಟ 125-150 ಸ್ಥಾನಗಳನ್ನು ಗಳಿಸುವ ಸಾಧ್ಯತೆ ಇದೆ ಎಂದು ಹೇಳಿವೆ. ಈ ಬಾರಿ ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಬಿಜೆಪಿ ಮಹತ್ವದ ಸಾಧನೆಗೈಯ್ಯಲಿದೆ ಎಂದು ಈ ಸಮೀಕ್ಷೆಗಳು ತಿಳಿಸಿವೆ.
2019 ರ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳಲ್ಲಿ 13 ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 306 ಸ್ಥಾನಗಳನ್ನು ಗಳಿಸಬಹುದು ಮತ್ತು ಕಾಂಗ್ರೆಸ್ ನೇತೃತ್ವದ ಯುಪಿಎ ಕೂಟ120 ಸ್ಥಾನ ಗಳಿಸಬಹುದು ಎಂದಿದ್ದವು. ಅಂತಿಮ ಫಲಿತಾಂಶ ಬಂದಾಗ ಬಿಜೆಪಿಯೇ 303 ಸ್ಥಾನ ಗಳಿಸಿ ಎನ್‌ಡಿಎ 353 ಸ್ಥಾನಗಳನ್ನು ಗೆದ್ದಿತ್ತು.ಯುಪಿಎ 93 ಸ್ಥಾನಗಳನ್ನು ಮಾತ್ರವೇ ಗಳಿಸಿತ್ತು. ಅದರಲ್ಲೂ ಕಾಂಗ್ರೆಸ್ 52 ಸ್ಥಾನಗಳಿಗೆ ಕುಸಿತ ಕಂಡಿತ್ತು.
ಗುಜರಾತ್‌ನಲ್ಲಿ ಬಿಜೆಪಿ
ಗುಜರಾತ್‌ನಲ್ಲಿ ಬಿಜೆಪಿ 25-26 ಸ್ಥಾನಗಳನ್ನು ಗೆಲ್ಲಲಿದ್ದು, I.N.D.I.A ಕೂಟಕ್ಕೆ 1 ಸ್ಥಾನವಷ್ಟೇ ಲಭಿಸಲಿದೆ ಎಂದು ಇಂಡಿಯಾ ಟುಡೇ -ಆಕ್ಸಿಸ್ ಮೈ ಇಂಡಿಯಾ ಪೋಲ್ ಹೇಳಿದೆ.
ಹಾಗೆಯೇ ಮಧ್ಯಪ್ರದೇಶ ಇನ್ನೂ ಬಿಜೆಪಿಯ ಭದ್ರಕೋಟೆಯಾಗಿಯೇ ಇದ್ದು ಬಿಜೆಪಿ 28-29 ಸ್ಥಾನಗಳನ್ನು ಗಳಿಸಲಿದ್ದು, I.N.D.I.A ಕೂಟಕ್ಕೆ 1 ಸ್ಥಾನ ಮಾತ್ರವೇ ದಕ್ಕಲಿದೆ .
ಛತ್ತೀಸ್‌ಗಢದಲ್ಲಿ ಬಿಜೆಪಿ 10-11 ಸ್ಥಾನಗಳನ್ನು ಗೆಲ್ಲಲಿದ್ದು, I.N.D.I.A ಕೂಟಕ್ಕೆ1 ಸ್ಥಾನ ಸಿಗಬಹುದು .
ದಿಲ್ಲಿಯಲ್ಲಿ ಎಲ್ಲ 7 ಸ್ಥಾನಗಳು ಬಿಜೆಪಿಗೆ ಲಭಿಸಲಿದ್ದು, ಇದೇ ಮೊದಲ ಬಾರಿಗೆ ದಿಲ್ಲಿಯಲ್ಲಿ ಆಪ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದರೂ, ಈ ಕೂಟಕ್ಕೆ ಒಂದೂ ಸ್ಥಾನ ಸಿಗಲಾರದು .
ರಾಜಸ್ತಾನದಲ್ಲಿ ಬಿಜೆಪಿಗೆ 22 ಹಾಗೂ I.N.D.I.A ಕೂಟಕ್ಕೆ 2-7 ಸ್ಥಾನಗಳು ಎಂದಿವೆ ಸಮೀಕ್ಷೆಗಳು.
ಉತ್ತರಪ್ರದೇಶದ 80 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಈ ಬಾರಿ 67-74 ಸ್ಥಾನಗಳನ್ನು ಗೆಲ್ಲಲಿದ್ದು, I.N.D.I.A ಕೂಟಕ್ಕೆ 6-8 ಸ್ಥಾನಗಳು ಲಭಿಸಬಹುದು.
ಉತ್ತರಾಖಂಡದ ಎಲ್ಲ 5 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ.
ಪ.ಬಂ.ದಲ್ಲಿ ಬಿಜೆಪಿ ಮೇಲುಗೈ
ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ದೊಡ್ಡ ಮೇಲುಗೈ ಲಭಿಸಲಿದ್ದು, ಆಳುವ ಟಿಎಂಸಿ ಹಿನ್ನಡೆ ಕಾಣಲಿದೆ . ಸಮೀಕ್ಷೆಗಳ ಪ್ರಕಾರ ಈ ಬಾರಿ ಅಲ್ಲಿ ಬಿಜೆಪಿ 21-25 ಕ್ಷೇತ್ರಗಳನ್ನು ಗೆದ್ದು ಮಮತಾಗೆ ಹಿನ್ನಡೆ ಕಾಣಿಸಲಿದ್ದು, ಟಿಎಂಸಿ 16-20 ಕ್ಷೇತ್ರಗಳಲ್ಲಿ ಗೆಲ್ಲಬಹುದು . ಈ
ಪಂಜಾಬ್‌ನಲ್ಲಿ ಕಾಂಗ್ರೆಸ್ 11 ಸ್ಥಾನಗಳನ್ನು ಆಪ್ 2 ಸ್ಥಾನಗಳನ್ನು ಗೆಲ್ಲಬಹುದು ಎನ್ನಲಾಗಿದೆ.
ತಮಿಳ್ನಾಡಿನಲ್ಲಿ ಆಳುವ ಡಿಎಂಕೆ-ಕಾಂಗ್ರೆಸ್ ಕೂಟ 33-37 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಬಿಜೆಪಿಗೆ 2-4 ಸ್ಥಾನಗಳು ಲಭಿಸಲಿವೆ ಎಂದಿರುವ ಸಮೀಕ್ಷೆಗಳು.
ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ 25-35 ಮತ್ತು ಇಂಡಿ ಕೂಟಕ್ಕೆ 15-18 ಸ್ಥಾನಗಳು ಲಭಿಸಲಿವೆ ಎಂದಿವೆ.
ದಕ್ಷಿಣ ಭಾರತದಲ್ಲಿ ಬಿಜೆಪಿ
ಈ ಬಾರಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಬಿಜೆಪಿ ಮಹತ್ವದ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆಗಳು ತಿಳಿಸಿದ್ದು, ಕರ್ನಾಟಕವಲ್ಲದೆ, ಕೇರಳ, ತಮಿಳ್ನಾಡು, ಆಂಧ್ರ, ತೆಲಂಗಾಣ, ಗೋವಾದಲ್ಲಿ ವಿಶೇಷ ಸಾಧನೆ ಮಾಡಲಿದೆ ಎಂದಿವೆ . ಆಂಧ್ರಪ್ರದೇಶದಲ್ಲಿ ವೈಎಸ್‌ಆರ್ ಕಾಂಗ್ರೆಸಿಗೆ ಹೀನಾಯ ಸೋಲು ಕಾದಿದ್ದು, ಅಲ್ಲಿ ಬಿಜೆಪಿ-ಟಿಡಿಪಿ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಗಳು ಹೇಳಿವೆ.
ಕರ್ನಾಟಕದಲ್ಲಿ ಬಿಜೆಪಿಗೆ 20-22 ಸ್ಥಾನಗಳು ಲಭಿಸಿ ಆಳುವ ಕಾಂಗ್ರೆಸಿಗೆ ಭಾರೀ ಮುಖಭಂಗವಾಗಲಿದೆ ಎಂದು ಮತದಾನೋತ್ತರ ಸಮೀಕ್ಷೆಗಳು ತಿಳಿಸಿವೆ. ರಾಜ್ಯದಲ್ಲಿ ಕಾಂಗ್ರೆಸಿಗೆ 3-5 ಸ್ಥಾನಗಳು ಮತ್ತು ಜೆಡಿಎಸ್‌ಗೆ 3 ಸ್ಥಾನಗಳು ಲಭಿಸಲಿವೆ ಎಂದು ಅವು ಹೇಳಿವೆ.
ಕೇರಳದಲ್ಲಿ ಮೊದಲ ಬಾರಿಗೆ ಖಾತೆ ತೆರೆಯಲಿದೆ ಬಿಜೆಪಿ
ಸಮೀಕ್ಷೆಗಳು ಕೇರಳದಲ್ಲಿ ಈ ಬಾರಿ ಬಿಜೆಪಿ ಖಾತೆ ತೆರೆಯಲಿದೆ ಎಂಬುದಾಗಿ ಹೇಳಿದ್ದು ಭಾರೀ ಕುತೂಹಲ ಮೂಡಿಸಿದೆ. ಎಬಿಪಿ-ಸಿ ವೋಟರ್, ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ, ಟೈಮ್ಸ್ ನೌ-ಇಟಿಜಿ , ಇಂಡಿಯಾ ಟಿವಿ-ಸಿಎನ್‌ಎಕ್ಸ್ ಗಳು ಈ ಬಾರಿ ಬಿಜೆಪಿ-ಎನ್‌ಡಿಎ ಸಂಸದ ಮೊದಲ ಬಾರಿಗೆ ಲೋಕಸಭೆಯಲ್ಲಿ ಕೇರಳವನ್ನು ಪ್ರತಿನಿಧಿಸಲಿದ್ದಾರೆ ಎಂದು ಹೇಳಿವೆ. ಇವು ಆಳುವ ಸಿಪಿಎಂ ನೇತೃತ್ವದ ಎಲ್‌ಡಿಎಫ್‌ಗೆ ಭಾರೀ ಹಿನ್ನಡೆಯಾಗಲಿದೆ ಎಂದಿದ್ದು, ಕಾಂಗ್ರೆಸ್ ನೇತೃತ್ವದ ಯುಡಿಎಫ್‌ಗೆ 17-19 ಸ್ಥಾನಗಳು ಲಭಿಸಲಿವೆ ಎಂದಿವೆ.
ಈ ಬಾರಿ ಬಿಜೆಪಿ -ಎನ್‌ಡಿಎ ಖಾತೆ ತೆರೆಯಲಿದ್ದು 1-3 ಸ್ಥಾನಗಳವರೆಗೆ ಪಡೆಯುವ ಸಾಧ್ಯತೆ ಇದೆ ಎಂದು ಮತದಾನೋತ್ತರ ಸಮೀಕ್ಷೆಗಳು ಹೇಳಿರುವುದು ಕೇರಳದ ರಾಜಕೀಯ ರಂಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಯಾವ ಸಮೀಕ್ಷೆ ಏನು ಹೇಳುತ್ತದೆ?
*ಇಂಡಿಯಾ ನ್ಯೂಸ್ -ಡಿ- ಡೈನಾಮಿಕ್ಸ್ :ಎನ್‌ಡಿಎ- 371, ಐ.ಎನ್.ಡಿ.ಐ.ಕೂಟ-125, ಇತರರು -47
*ಜನ್ ಕೀ ಬಾತ್: ಎನ್‌ಡಿಎ-362-392, ಐ.ಎನ್.ಡಿ.ಐ.ಎ -141-161, ಇತರರು -10-20
*ನ್ಯೂಸ್‌ನೇಷನ್: ಎನ್‌ಡಿಎ 342-378 , ಐ.ಎನ್.ಡಿ.ಐ.ಎ-158-169, ಇತರರು-21-23
*ರಿಪಬ್ಲಿಕ್ ಭಾರತ್ -ಮ್ಯಾಟ್ರಿಜ್:353-368, ಐ.ಎನ್.ಡಿ.ಐ.ಎ-118-133, ಇತರರು-43-48
*ದೈನಿಕ್ ಭಾಸ್ಕರ್:ಎನ್‌ಡಿಎ 285-350, ಐ.ಎನ್.ಡಿ.ಐ.ಎ-145-201, ಇತರರು -33-49
*ರಿಪಬ್ಲಿಕ್ ಟಿವಿ ಮಾರ್ಕ್:ಎನ್‌ಡಿಎ 359, ಐ.ಎನ್.ಡಿ.ಐ.-154, ಇತರರು -30