ಮೀನು ಮಾರಾಟ ಮಾಡಿ ಕಾನೂನು ಪದವಿ ಪಡೆದು ವಕೀಲನಾದ ಸಾಧಕ!

* ಐ.ಬಿ. ಸಂದೀಪ್ ಕುಮಾರ್

ಹೊಸದಿಗಂತ ಪುತ್ತೂರು:

ಛಲವಿದ್ದರೆ ಜೀವನಕ್ಕೆ ಬಲ ಬರುತ್ತದೆ. ಕೆಟ್ಟ ಸಮಯ, ಒಳ್ಳೆಯ ಸಮಯ ಎಂದು ಹಳಿಯುತ್ತಾ ಕುಳಿತುಕೊಳ್ಳುವ ಬದಲು ಹಠ ಸಾಧನೆ ಮಾಡಿದರೆ ಜೀವನದಲ್ಲೂ ಬದಲಾವಣೆ ತರಲು ಸಾಧ್ಯ. ಈ ನಿಟ್ಟಿನಲ್ಲಿ ಕೆಟ್ಟ ಸಮಯವೂ ಸಾಧಕನಿಗೆ ಒಳಿತನ್ನೇ ಮಾಡುತ್ತದೆ ಎಂಬುದಕ್ಕೆ ಪುತ್ತೂರಿನ ಈಶ್ವರಮಂಗಲದ ಮುಂಡ್ಯ ಚಿಮಿಣಿಗುಡ್ಡೆ ನಿವಾಸಿ ಯುವಕನೋರ್ವ ಉದಾಹರಣೆಯಾಗಿದ್ದಾರೆ. ಕಷ್ಟಪಟ್ಟು ದುಡಿದು ಆದಾಯ ಗಳಿಸಿ ಶಿಕ್ಷಣ ಪಡೆದ ಈ ಯುವಕ ಇದೀಗ ವಕೀಲನಾಗಿ ತನ್ನ ವೃತ್ತಿ ಜೀವನಕ್ಕೆ ಅಡಿಯಿರಿಸಿದ ಸಾಧಕನೆಂಬ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಈಶ್ವರಮಂಗಲ ಮುಂಡ್ಯ ನಿವಾಸಿ ಕೃಷಿಕ ದಾಮೋದರ ಪಾಟಾಳಿ-ಗೀತಾ ದಂಪತಿಯ ಇಬ್ಬರು ಪುತ್ರರಲ್ಲಿ ಗೌರೀಶ ಚಿಮಿಣಿಗುಡ್ಡೆ ಎರಡನೆಯವರು. ಅವರು ಮನೆಯಲ್ಲಿ ಕೃಷಿ ಕಾರ್ಯಗಳನ್ನು ನಡೆಸಿ ಬಳಿಕ ಕಾಲೇಜಿಗೆ ತೆರಳಿ ಅಧ್ಯಯನ ಮಾಡುತ್ತಿದ್ದರು. ನಾಲ್ಕು ವರ್ಷಗಳ ಹಿಂದೆ ಜಗತ್ತಿನೆಲ್ಲೆಡೆ ಕೊರೋನಾ ಮಹಾಮಾರಿಯ ಬಾಧೆ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿತು. ಎಲ್ಲರಂತೆ ಗೌರೀಶ ಅವರ ಕುಟುಂಬವೂ ಕೊರೋನಾ ಮಹಾಮಾರಿಗೆ ತಲ್ಲಣಿಸಿ ಹೋಯಿತು. ಶಿಕ್ಷಣ ಪಡೆಯಲು ಕೈಯಲ್ಲಿ ಚಿಕ್ಕಾಸೂ ಇಲ್ಲದಂತಹ ಪರಿಸ್ಥಿತಿ. ಆದರೆ, ಗೌರೀಶ ಇದಕ್ಕೆ ಎದೆಗುಂದಲಿಲ್ಲ. ಯಾವುದಾದರೂ ಕೆಲಸ ಮಾಡಿ ಆದಾಯ ಗಳಿಸಬೇಕೆಂಬ ಹಠಕ್ಕೆ ಬಿದ್ದರು. ಇದಕ್ಕೆ ಅವರು ಕಂಡುಕೊಂಡ ಮಾರ್ಗವೆಂದರೆ ಮೀನಿನ ವ್ಯಾಪಾರ.

ಹಸಿ ಮೀನು ವ್ಯಾಪಾರ
ಕೊರೋನಾ ದೇಶವನ್ನೇ ಅಲ್ಲೋಲ ಕಲ್ಲೋಲ ಮಾಡುತ್ತಿದ್ದರೆ ಇತ್ತ ಗೌರೀಶ ಕಾಲೇಜಿಗೆ ರಜೆ ಘೋಷಿಸಿದ್ದ ಸಂದರ್ಭ ಈಶ್ವರಮಂಗಲದಲ್ಲಿ ಹಸಿ ಮೀನಿನ ವ್ಯಾಪಾರ ಆರಂಭಿಸಿದರು. ಇದರಿಂದ ಅವರು ಒಂದಿಷ್ಟು ಆದಾಯವನ್ನು ಗಳಿಸಿದರು. ಕೊನೆಗೂ ಕೊರೋನಾ ಬಾಧೆ ಕೊನೆಗೊಂಡಿತು. ಎಲ್ಲಾ ನಿರ್ಬಂಧಗಳು ತೆರವಾಯಿತು. ಆದರೆ, ಗೌರೀಶ ಕೈ ಹಿಡಿದಿದ್ದ ಹಸಿ ಮೀನಿನ ವ್ಯಾಪಾರವನ್ನು ಮಾತ್ರ ನಿಲ್ಲಿಸಲಿಲ್ಲ. ತನ್ನ ಮುಂದಿನ ಶಿಕ್ಷಣಕ್ಕದೇ ಆದಾಯ ಮೂಲ ಎಂದು ಮನಗಂಡು ಮೀನಿನ ವ್ಯಾಪಾರವನ್ನು ಮುಂದುವರಿಸಿದರು. ಅದರ ಆದಾಯದಿಂದಲೇ ಕಾನೂನು ಕಾಲೇಜಿಗೆ ಸೇರಿ ಶಿಕ್ಷಣ ಶುಲ್ಕವನ್ನು ಪಾವತಿಸಿ ಶಿಕ್ಷಣ ಮುಂದುವರಿಸಿದರು. ಕಾನೂನು ಕಾಲೇಜಿನಲ್ಲೂ ಅವರು ಉಪನ್ಯಾಸಕರ ನೆಚ್ಚಿನ ಶಿಷ್ಯನಾಗಿ ಬೆಳೆದರು.

3 ಗಂಟೆಗೇ ಏಳುತ್ತಿದ್ದರು
ದಾಮೋದರ ಪಾಟಾಳಿಯವರಿಗೆ ಜೀವನ ನಿರ್ವಹಣೆಗೆ ಬೇಕಾಗುವಷ್ಟು ಮಾತ್ರ ಕೃಷಿ ಭೂಮಿಯಿದೆ. ಇದರಿಂದಲೇ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದೂ ಅಸಾಧ್ಯವಾಗಿತ್ತು. ಇದನ್ನು ಮನಗಂಡ ಗೌರೀಶ ಅವರು ತನ್ನ ಶಿಕ್ಷಣವನ್ನು ಪೂರೈಸಲು ಸ್ವಂತ ದುಡಿಮೆಯನ್ನೇ ನೆಚ್ಚಿಕೊಂಡರು. ಬೆಳಗ್ಗೆ 3 ಗಂಟೆಗೆ ಎದ್ದು ಮಂಗಳೂರಿನ ದಕ್ಕೆಗೆ ತೆರಳಿ ಅಲ್ಲಿ ಮೀನುಗಳನ್ನು ಆಯ್ದು ಖರೀದಿಸಿ ಪುತ್ತೂರಿಗೆ ಮರಳುತ್ತಿದ್ದರು. ಇಲ್ಲಿಗೆ ಬಂದ ಬಳಿಕ ಇರ್ದೆ, ರೆಂಜ, ಸುಳ್ಯಪದವು, ಈಶ್ವರಮಂಗಲಗಳಲ್ಲಿ ಇರುವಂತಹ ಅಂಗಡಿಗಳಿಗೆ ಮೀನುಗಳನ್ನು ಮಾರಾಟ ಮಾಡಿ ಮನೆಗೆ ಮರಳುತ್ತಿದ್ದರು. ಮನೆಯಲ್ಲಿ ಊಟೋಪಹಾರ ಮುಗಿಸಿ ಮತ್ತೆ ಕಾಲೇಜಿನತ್ತ ಮುಖ ಮಾಡುತ್ತಿದ್ದರು. ಸಮಯಕ್ಕೆ ಸರಿಯಾಗಿ ಕಾಲೇಜಿನ ತರಗತಿಯಲ್ಲಿ ಇರುತ್ತಿದ್ದ ಗೌರೀಶ ತನ್ನ ಕೆಲಸದಲ್ಲಿರಿಸಿದ್ದ ನಿಷ್ಠೆಯನ್ನೇ ಶಿಕ್ಷಣಕ್ಕೂ ನೀಡುತ್ತಿದ್ದರು.

ವಕೀಲರಾದ ಗೌರೀಶ
ಗೌರೀಶ ನಗರದ ವಿವೇಕಾನಂದ ಕಾನೂನು ಕಾಲೇಜಿನಲ್ಲಿ ವೃತ್ತಿಪರ ಶಿಕ್ಷಣ ಪಡೆದಿರುವ ಕಠಿಣ ಪರಿಶ್ರಮ ಜೀವಿ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಎಲ್‍ಎಲ್‍ಬಿ ಪದವಿಯನ್ನು ಪೂರೈಸಿದ ಗೌರೀಶ ಇದೀಗ ಬೆಂಗಳೂರಿಗೆ ತೆರಳಿ ಹೈಕೋರ್ಟಿನಲ್ಲಿ ನ್ಯಾಯವಾದಿ ಫಲಕವನ್ನು ಪಡೆದುಕೊಂಡಿದ್ದಾರೆ. ಗೌರೀಶ ಅವರ ಹಿರಿಯ ಸಹೋದರ ಚಂದ್ರಹಾಸ ಈಶ್ವರಮಂಗಲ ಅವರು ಕೂಡಾ ಪುತ್ತೂರಿನಲ್ಲಿ ವಕೀಲ ವೃತ್ತಿಯಲ್ಲಿ ತೊಡಗಿದ್ದಾರೆ. ಮಾತ್ರವಲ್ಲ ಅವರ ಅತ್ತಿಗೆ ಆಶಿತಾ ಅವರು ಕೂಡಾ ವಕೀಲ ವೃತ್ತಿಯನ್ನೇ ನಡೆಸುತ್ತಿದ್ದಾರೆ. ಇದೀಗ ಗೌರೀಶ ಕೂಡಾ ವಕೀಲರಾಗಿರುವ ಕಾರಣ ಹೆತ್ತವರನ್ನು ಹೊರತುಪಡಿಸಿ ಉಳಿದವರೆಲ್ಲಾ ನ್ಯಾಯವಾದಿಗಳೇ ಆಗಿದ್ದಾರೆ.

ನಿಯತ್ತಿದ್ದರೆ ಬದುಕು ಉತ್ತಮ
ವಿವೇಕಾನಂದ ಕಾಲೇಜಿನ ಶಿಕ್ಷಕರ ಸಹಕಾರ, ತಂದೆ ತಾಯಿ ಆಶೀರ್ವಾದ, ದೈವ ದೇವರ ದಯೆ, ಗೆಳೆಯರ ಸಹಕಾರ ಇಂದು ಈ ಮಟ್ಟಕ್ಕೆ ಬರಲು ಸಹಕಾರಿ ಆಗಿದೆ. ಕೆಲಸ ಯಾವುದೇ ಆಗಲಿ ನಾವು ಮಾಡುವ ಕೆಲಸವನ್ನು ನಾವು ನಿಯತ್ತಿನಿಂದ ಮಾಡಿದರೆ ಭಗವಂತನ ಸಹಕಾರ ಖಂಡಿತಾ ಇದೆ ಎಂಬುದಕ್ಕೆ ನಾನೇ ಸಾಕ್ಷಿ. ಯುವಕರು ಜೀವನ ನಿರ್ವಹಣೆಗೆ ಯಾವುದೇ ರೀತಿಯ ಕೆಲಸ ಮಾಡಲು ಹಿಂಜರಿಯಬಾರದು. ನಾವು ಕೆಲಸ ಮಾಡಿ ಆದಾಯ ಗಳಿಸುತ್ತೇವೆಯೇ ಹೊರತು ಕದ್ದು, ಮೋಸ ಮಾಡಿ ಅಲ್ಲ ಎಂಬುದನ್ನು ತಿಳಿದುಕೊಳ್ಳಬೇಕು.- ಗೌರೀಶ, ವಕೀಲರು

ಹಿಂ.ಜಾ.ವೇ. ಸಂಚಾಲಕ
ಗೌರೀಶ ಅವರು ಕೇವಲ ಶಿಕ್ಷಣದಲ್ಲಷ್ಟೇ ಅಲ್ಲ ಸಾಮಾಜಿಕ ಕ್ಷೇತ್ರದಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಅವರು ಹಿಂದು ಜಾಗರಣ ವೇದಿಕೆಯ ಈಶ್ವರಮಂಗಲದ ಸಂಚಾಲಕರಾಗಿದ್ದಾರೆ. ಸಂಘಟನೆಯಲ್ಲಿ ತೊಡಗಿರುವ ಗೌರೀಶ ಅವರು ಸಂಕಷ್ಟದಲ್ಲಿರುವವರಿಗೂ ತನ್ನ ಕೈಲಾದಷ್ಟು ಸಹಾಯ ಮಾಡುವ ಮನೋಭಾವದವರು. `ನನ್ನ ಮಗ ಬೆಳಗ್ಗೆ ಎದ್ದು ಮಂಗಳೂರಿಗೆ ಹೋಗಿ ಮೀನು ತಂದು ಮಾರಾಟ ಮಾಡಿ ಆದಾಯ ಗಳಿಸಿ, ಬಳಿಕ ಕಾಲೇಜಿಗೆ ಹೋಗಿ ಇಂದು ವಕೀಲನಾಗಿದ್ದಾನೆ. ಹಿಂದು ಸಂಘಟನೆಯಲ್ಲೂ ಇದ್ದಾನೆ. ಅವನ ಜೀವನ ಶೈಲಿ ಇತರರಿಗೆ ಮಾದರಿಯಾಗಿದೆ’ ಎಂದು ಸಂತಸದಿಂದ ನುಡಿಯುತ್ತಾರೆ ದಾಮೋದರ ಪಾಟಾಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!