ಅಧ್ಯಯನ ಪ್ರವೃತ್ತಿ ಬದುಕಿನುದ್ದಕ್ಕೂ ನಿರಂತರವಾಗಿರಲಿ: ಸೋಸಲೆ ಶ್ರೀ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಬದುಕಿನುದ್ದಕ್ಕೂ ವಿದ್ಯಾರ್ಥಿಯಾಗಿದ್ದು, ಭಾರತೀಯ ಪುರಾತನ ಶಾಸ್ತ್ರಜ್ಞಾನ ಪಡೆಯುವ ಹಸಿವು ಇದ್ದರೆ ಜೀವನ ಸಾರ್ಥಕವಾಗುತ್ತದೆ. ಅಧ್ಯಯನ ಪ್ರವೃತ್ತಿ ಇದ್ದರೆ ಬದುಕು ತೇಜೋಮಯವಾಗುತ್ತದೆ ಎಂದು ಸೋಸಲೆ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಹೇಳಿದರು.

ಕೃಷ್ಣಮೂರ್ತಿಪುರಂನ ಶ್ರೀ ವ್ಯಾಸತೀರ್ಥ ವಿದ್ಯಾಪೀಠದಲ್ಲಿ ಸೋಸಲೆ ಶ್ರೀ ವ್ಯಾಸರಾಜ ಮಠ ಹಮ್ಮಿಕೊಂಡಿರುವ ಶ್ರೀಮನ್ ನ್ಯಾಯ ಸುಧಾ ಮಂಗಳ ಮಹೋತ್ಸವದ 2ನೇ ದಿನದ ಕಲಾಪಕ್ಕೆ ಸೋಮವಾರ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.

ಜ್ಞಾನದ ಹಂಬಲ ಇದ್ದವನಿಗೆ ನಿರಂತರವಾಗಿ ಓದುವ ಪ್ರವೃತ್ತಿ ಬೇಕು. ಸಂಯಮ ಇರಬೇಕು. ಓದಿದ್ದನ್ನು ಚಿಂತನೆ ಮಾಡಬೇಕು. ಆಗ ಅದು ಜ್ಞಾನವಾಗಿ ನಮ್ಮಲ್ಲಿ ನೆಲೆಸಿ ಸಾರ್ಥಕತೆ ಪಡೆಯುತ್ತದೆ ಎಂದರು.

ನಾನು ಕಳೆದ ಒಂದು ದಶಕದಿಂದ ವಿದ್ಯಾರ್ಥಿಗಳಿಗೆ ಶಾಸ್ತ್ರಪಾಠ ಮಾಡಿದ್ದೇನೆ ಎಂದು ವಿದ್ವಾಂಸರು ಪ್ರಶಂಸೆ ನೀಡಿದ್ದಾರೆ. ನನ್ನೊಂದಿಗೆ ಪ್ರದ್ಯುಮ್ನ ಆಚಾರ್ಯ, ಶೇಷಗಿರಿ ಆಚಾರ್ಯರೂ ಸೇರಿ ಅನೇಕ ಪ್ರಾಧ್ಯಾಪಕರು ಮಕ್ಕಳಿಗೆ ಬೋಧನೆ ಮಾಡಿದ್ದಾರೆ. ಎಲ್ಲರ ಸಹಕಾರದಿಂದ ವಿದ್ಯಾಪೀಠ ಬೆಳೆಯುತ್ತಿದೆ. ಸುಧಾ ಪರೀಕ್ಷೆ ಮುಗಿದಿದೆ. ಇನ್ನು ಮುಂದೆ ಓದುವುದು ಏನೂ ಇಲ್ಲ ಎಂಬ ಭಾವ ಮಕ್ಕಳಲ್ಲಿ ಬರಬಾರದು. ವಿದಿತ ವೇದ್ಯರು- ಆಗುವುದು ಬೇಡ. ಅವರಲ್ಲಿ ನಿತ್ಯವೂ ಸುಧಾ ಗ್ರಂಥದ ಮೇಲಿನ ಚಿಂತನೆಗಳು ಹೊಸ ರೂಪ ಪಡೆಯಬೇಕು ಎಂದು ಸೋಸಲೆ ಶ್ರೀಗಳು ಸಲಹೆ ನೀಡಿದರು.

ಮಂತ್ರಾಲಯ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ನಾಡಿನ ವಿವಿಧ ಮಠ- ಪೀಠಗಳಲ್ಲಿ ಜಯತೀರ್ಥರು ರಚಿಸಿದ ಶ್ರೀಮನ್ ನ್ಯಾಯಸುಧಾ ಗ್ರಂಥದ ಮಂಗಳ ಮಹೋತ್ಸವ ಆಗಾಗ್ಗೆ ನಡೆಯುತ್ತದೆ. ಆದರೆ ಶ್ರೀ ವ್ಯಾಸತೀರ್ಥ ವಿದ್ಯಾಪೀಠದಲ್ಲಿ ಶ್ರೀ ವ್ಯಾಸರಾಜ ಯತಿಗಳ ವ್ಯಾಸತ್ರಯ ಗ್ರಂಥಗಳ ಸಹಿತ ಸುಧಾ ಮಂಗಳ ನಡೆಯುವುದು ಬಹಳ ವಿಶೇಷ ಎಂದರು.

4 ವಿದ್ಯಾರ್ಥಿಗಳೂ ಉತ್ತಮವಾಗಿ ಗ್ರಂಥಗಳ ಅನುವಾದ, ವ್ಯಾಖ್ಯಾನ ಮಾಡಿದ್ದಾರೆ. ವಿದ್ವಾಂಸರು ಎಲ್ಲಲ್ಲಿ ಕ್ರಾಸ್ ಮಾಡಿ ಪ್ರಶ್ನೆ ಕೇಳಿದರೂ ವಿಚಲಿತರಾಗದೇ ಸಮರ್ಥ ಉತ್ತರ ನೀಡಿದ್ದಾರೆ. ಈ ವಿದ್ಯಾಪೀಠದ ಮಕ್ಕಳ ಜ್ಞಾನಧಾರೆ ಹೀಗೆಯೇ ಗಂಗೆಯಂತೆ ಹರಿಯಲಿ. ಶ್ರೀ ವ್ಯಾಸರಾಜರು ವಿಜಯನಗರ ಸಾಮ್ರಾಜ್ಯವನ್ನೂ ಆಳ್ವಿಕೆ ಮಾಡಿ ಶಾಸ್ತ್ರಪಾಠಗಳನ್ನೂ ಮಾಡುತ್ತಿದ್ದ ಸಂದರ್ಭ 24 ಜನ ಕೇಶವಾದಿ ಯತಿಗಳು, ವಿವಿಧ ಗೃಹಸ್ಥ ಪಂಡಿತರು, ಬಂಗಾಲ ಮೊದಲಾದ ಪ್ರಾಂತ್ಯಗಳಲ್ಲಿ ವರಮಾಲಿನೀಶ್ವರ ಮುಂತಾದ ವಿದ್ವಾಂಸರು ಬೆಳೆದರು. ಅಂಥಾ ಕಾಲ ಮತ್ತೆ ಸೋಸಲೆ ವ್ಯಾಸರಾಜರ ಈ ಮಠಕ್ಕೆ ಬರಲಿ ಎಂದು ಅವರು ಆಶಿಸಿದರು.

ಶಿವಮೊಗ್ಗ ಜಿಲ್ಲೆ ಬಾಳಗಾರು ಮಠದ ಶ್ರೀ ಅಕ್ಷೋಭ್ಯ ರಾಮಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ಪಂಡಿತರು ಏನು ಪ್ರಶ್ನೆ ಕೇಳಿದರೂ ಈ ವಿದ್ಯಾರ್ಥಿಗಳು ಉತ್ತರ ನೀಡುತ್ತಾ ಇದ್ದಾರೆ. ಸುಘೋಷ, ಪ್ರಣವ, ಆಯಾಚಿತ ಶ್ರೀಶ ಮತ್ತು ಸೌಮಿತ್ರಿ ಅವರ ಪ್ರತಿಭೆಗೆ ವಿದ್ವಜ್ಜನರು ಸೈ ಎಂದಿದ್ದಾರೆ. ಇವರನ್ನು ನೋಡಿದರೆ ನನಗೆ ಇನ್ನಷ್ಟು ಅಧ್ಯಯನ ಮಾಡುವ ಆಸೆ ಚಿಗುರಿದೆ ಎಂದು ಹೇಳಿದರು.

ವಿದ್ಯಾರ್ಥಿಗಳ ಆತ್ಮವಿಶ್ವಾಸ, ಟಿಪ್ಪಣಿ ಸಹಿತ ಅವಲೋಕನ, ವಿನಯ, ಧೀರೋದ್ಧಾತ ಶೈಲಿ, ಪ್ರಾಮಾಣಿಕತೆ, ವಿದ್ಯಾಗಾಂಭೀರ್ಯಕ್ಕೆ ನಾವು ಮೆಚ್ಚಿದ್ದೇವೆ ಎಂದರು. ಸೋಸಲೆ ಶ್ರೀಗಳು ತಮ್ಮ ದೀಕ್ಷೆ, ಮಠಾಧಿಕಾರ, ಸಂಚಾರ, ಪ್ರವಚನದ ಜತೆಗೆ ಈ ಮಕ್ಕಳಿಗೆ ಪಾಠ ಮಾಡುವ ವ್ರತವನ್ನೂ ಅನುಸರಿಸಿ ದಿಗ್ವಿಜಯ ಸಾಧಿಸಿದ್ದಾರೆ. ಇದು ಫಲ ಹೊತ್ತ ವಿದ್ಯಾಪೀಠವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಪಂಡಿತ, ವಿದ್ವಾಂಸರ ಉಪಸ್ಥಿತಿ:
ಮಂತ್ರಾಲಯದ ಹಿರಿಯ ವಿದ್ವಾಂಸ ರಾಜಾ ಎಸ್. ಗಿರಿ ಆಚಾರ್ಯ, ಹಿರಿಯ ಪಂಡಿತರಾದ ವಾದಿರಾಜ ಆಚಾರ್ಯ, ವಿದ್ವಾಂಸ ಶೇಷಗಿರಿ ಆಚಾರ್ಯ, ನಾಗಸಂಪಿಗೆ ಆಚಾರ್ಯ, ಶ್ರೀನಿವಾಸಮೂರ್ತಿ ಆಚಾರ್ಯ, ಮಾತರಿಶ್ವಾಚಾರ್ಯ, ವ್ಯಾಸತೀರ್ಥ ವಿದ್ಯಾಪೀಠದ ಪ್ರಾಂಶುಪಾಲ ಶ್ರೀನಿಧಿ ಆಚಾರ್ಯ ಪ್ಯಾಟಿ, ವ್ಯಾಸತೀರ್ಥ ವಿದ್ಯಾಪೀಠದ ಗೌರವ ಕಾರ್ಯದರ್ಶಿ ಡಾ.ಡಿ.ಪಿ. ಮಧುಸೂದನಾಚಾರ್ಯ ಉಪಸ್ಥಿತರಿದ್ದರು.

ಸಂಜೆ ವಿದ್ವಾನ್ ಸಮೀರಾಚಾರ್ಯರ ದಾಸವಾಣಿ ಸಂಗೀತ ಕಚೇರಿ ರಂಜಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!