ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೆಳ್ಳಂಬೆಳಗ್ಗೆ ನಡೆದ ಗುಂಡಿನ ದಾಳಿಯೊಂದು ಆತಂಕ ಮೂಡಿಸಿದೆ. ಉತ್ತರ ಪಶ್ಚಿಮ ದೆಹಲಿಯ ಶಾಲಿಮಾರ್ ಬಾಗ್ ಪ್ರದೇಶದಲ್ಲಿ 44 ವರ್ಷದ ಮಹಿಳೆಯನ್ನು ಸಾರ್ವಜನಿಕ ರಸ್ತೆಯಲ್ಲೇ ಗುಂಡಿಕ್ಕಿ ಕೊಲ್ಲಲಾಗಿದೆ.
ಮೃತ ಮಹಿಳೆಯನ್ನು ರಚನಾ ಯಾದವ್ ಎಂದು ಗುರುತಿಸಲಾಗಿದ್ದು, ಅವರು ತಮ್ಮ ಪತಿಯ ಹಳೆಯ ಕೊಲೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಮಾಹಿತಿ ಪ್ರಕಾರ, ರಚನಾ ಅವರ ತಲೆಗೆ ಗುಂಡು ತಗುಲಿದ್ದು, ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ. ಮೂಲತಃ ಭಲ್ಸ್ವಾ ಪ್ರದೇಶದವರಾದ ರಚನಾ, 2023ರಲ್ಲಿ ಪತಿ ವಿಜೇಂದ್ರ ಯಾದವ್ ಹತ್ಯೆಯಾದ ಘಟನೆಯನ್ನು ಕಣ್ಣಾರೆ ಕಂಡ ಸಾಕ್ಷಿಯಾಗಿದ್ದರು. ಆ ಕೊಲೆ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿತ್ತು.
ಇದನ್ನೂ ಓದಿ: FOOD | ಕೆಲವೇ ನಿಮಿಷದಲ್ಲಿ ತಯಾರಾಗುತ್ತೆ ಮಂಗಳೂರು ಸ್ಪೆಷಲ್ ಪೈನಾಪಲ್ ಶೀರಾ!
ಈ ಪ್ರಕರಣಕ್ಕೆ ಸಂಬಂಧಿಸಿ ಭರತ್ ಯಾದವ್ ಸೇರಿದಂತೆ ಆರು ಮಂದಿಯನ್ನು ಆರೋಪಿಗಳಾಗಿ ಗುರುತಿಸಲಾಗಿದೆ. ಐದು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿ ಭರತ್ ಯಾದವ್ ಪರಾರಿಯಾಗಿದ್ದಾನೆ. ಆತನಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದ್ದು, ದಾಳಿಕೋರರು ಬೈಕ್‌ನಲ್ಲಿ ಪರಾರಿಯಾಗಿದ್ದು ದಾಖಲಾಗಿದೆ. ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದಲೇ ಈ ಕೊಲೆ ನಡೆದಿರಬಹುದೆಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

