ಹೊಸದಿಗಂತ ವರದಿ, ಮೈಸೂರು
ನಿರಂತರವಾಗಿ ಅಧ್ಯಯನಶೀಲತೆ ಇದ್ದಾಗ ಜ್ಞಾನವು ವಿಸ್ತಾರವಾಗುತ್ತದೆ. ಜ್ಞಾನ ಭಂಡಾರ ಬೆಳೆದಷ್ಟೂ ವ್ಯಕ್ತಿತ್ವ ಉನ್ನತ ಮಟ್ಟಕ್ಕೆ ಏರುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಅಧ್ಯಯನ ಮತ್ತು ಜ್ಞಾನ ಸಂಪಾದನೆಗೆ ವಿಶೇಷವಾದ ಒತ್ತು ನೀಡಬೇಕು ಎಂದು ಶ್ರೀ ಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ನುಡಿದರು.
ಅವರು ನಗರದ ಕೃಷ್ಣಮೂರ್ತಿಪುರಂ ನಲ್ಲಿರುವ ಶ್ರೀ ವ್ಯಾಸ ತೀರ್ಥ ವಿದ್ಯಾಪೀಠದಲ್ಲಿ ಆಯೋಜನೆಗೊಂಡಿರುವ ಶ್ರೀಮನ್ ನ್ಯಾಯ ಸುಧಾ ಮಂಗಳ ಮಹೋತ್ಸವದ ಮೂರನೇ ದಿನವಾದ ಮಂಗಳವಾರ ವಿದ್ವತ್ ಸಭೆಗೆ ಚಾಲನೆ ನೀಡಿ ಆಶೀರ್ವಚನ ಅನುಗ್ರಹಿಸಿದರು.
ಶ್ರೀ ವ್ಯಾಸ ತೀರ್ಥ ವಿದ್ಯಾಪೀಠದ ವಿದ್ಯಾರ್ಥಿಗಳು ಸನಾತನ ಪರಂಪರೆಯಲ್ಲಿ ಬಂದಂತಹ ಶಾಸ್ತ್ರ ವಿದ್ಯೆಯನ್ನು ಚೆನ್ನಾಗಿ ಅಧ್ಯಯನ ಮಾಡಿದ್ದಾರೆ. ಶ್ರೀ ಜಯತೀರ್ಥ ವಿರಚಿತ ಶ್ರೀಮನ್ ನ್ಯಾಯ ಸುಧಾ ಗ್ರಂಥದ ಮೇಲೆ ಉತ್ತಮವಾದ ಪಾಂಡಿತ್ಯವನ್ನು ಗಳಿಸುತ್ತ ಇದ್ದಾರೆ. ಇದರೊಂದಿಗೆ ವ್ಯಾಸತ್ರಯ ಗ್ರಂಥಗಳ ಬಗ್ಗೆಯೂ ಅವರು ಅಧ್ಯಯನ ನಡೆಸಿ ಎರಡೂ ಗ್ರಂಥಗಳ ಪರೀಕ್ಷೆಯನ್ನು ಸುಲಲಿತವಾಗಿ ನೀಡುತ್ತಿರುವುದು ಸಂತೋಷದಾಯಕ.ಸಂಸ್ಕೃತ ಭಾಷೆಯಲ್ಲಿಯೇ ವಿದ್ಯಾರ್ಥಿಗಳು ಪಂಡಿತರ ಮತ್ತು ಜ್ಞಾನಿಗಳ ನೇರ ಪ್ರಶ್ನೆಗಳಿಗೆ ಉತ್ತರ ನೀಡಿ, ಸೂಕ್ತ ವ್ಯಾಖ್ಯಾನವನ್ನೂ ಕೊಡುತ್ತಿರುವುದು ವಿದ್ಯಾಪೀಠದ ಶಿಕ್ಷಣಕ್ಕೆ ಹಿಡಿದ ಕನ್ನಡಿಯಾಗಿದೆ ಎಂದರು.
ಸಮಾರಂಭದಲ್ಲಿ ದಿಕ್ಸೂಚಿ ಭಾಷಣವನ್ನು ಮಾಡಿದ ಹಿರಿಯ ವಿದ್ವಾಂಸ ಡಾ. ಎ. ವಿ ನಾಗಸಂಪಿಗೆ ಅವರು, ಅಧ್ಯಯನ ಮತ್ತು ಅಧ್ಯಾಪನ ಎರಡೂ ಪ್ರಕ್ರಿಯೆಗಳು ಸಾಂಗವಾಗಿ ಈ ವಿದ್ಯಾಪೀಠದಲ್ಲಿ ನೆರವೇರುತ್ತಿದೆ ಎಂದು ಹೊಗಳಿದರು.
ನಾಲ್ಕು ದಶಕಗಳ ಹಿಂದೆ ಪೇಜಾವರ ಶ್ರೀ ವಿಶ್ವೇಶ ತೀರ್ಥರುನ್ಯಾಯ ಸುಧಾ ಪರೀಕ್ಷೆ ನೀಡಿದವರಿಗೆ ಮಾತ್ರ ಪೂರ್ಣಪ್ರಜ್ಞಾ ವಿದ್ಯಾಪೀಠದಲ್ಲಿ ಅಧ್ಯಾಪಕ ವೃತ್ತಿ ನೀಡಲಾಗುವುದು ಎಂಬ ಕರಾರನ್ನು ಹಾಕಿದರು ಅವರು ಅಂದು ನಮಗೆ ಹಾಕಿಕೊಟ್ಟ ನಿಯಮಗಳೇ ಇಂದು ವರವಾಗಿದೆ. ಇದನ್ನು ಇನ್ನೊಂದು ರೀತಿ ವಿಸ್ತರಿಸಿದ ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥರು, ಸುಧಾ ಮಂಗಳ ಸಂದರ್ಭದಲ್ಲಿ ಸುಧಾ ಪರೀಕ್ಷೆಯೂ ನಡೆಯಬೇಕು. ವಿದ್ಯಾರ್ಥಿಗಳು ನೇರ ಪರೀಕ್ಷೆಯನ್ನು ಎದುರಿಸಬೇಕು ಎಂಬ ನಿಯಮವನ್ನು ಜಾರಿಗೆ ತಂದರು. ಇಂದು ದೇಶದ ಬಹುತೇಕ ಮಠಗಳೂ ಈ ನಿಯಮವನ್ನೇ ಅನುಸರಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ತಮಿಳುನಾಡಿನ ತೆನಾಲಿಯಲ್ಲಿ ನಡೆಸುತ್ತಿರುವ ತೆನಾಲಿ ಎಂಬ ವಿದ್ವತ್ಪೂರ್ಣ ಸಂಸ್ಕೃತ ಪರೀಕ್ಷೆ ನಡೆಸಲು ಆಯೋಜಕರಿಗೆ ಕೆಲವು ವರ್ಷಗಳ ಹಿಂದೆ ಆರ್ಥಿಕ ತೊಂದರೆಯಾಗಿತ್ತು. ಶ್ರೀ ಸತ್ಯಾತ್ಮತೀರ್ಥರು ಸ್ವಯಂ ಪ್ರೇರಿತರಾಗಿ ಆ ಸಂಸ್ಥೆಯನ್ನು ಸಂಪರ್ಕಿಸಿ ವಿದ್ಯಾರ್ಥಿಗಳ ಸಂಸ್ಕೃತ ಪರೀಕ್ಷೆಗೆ ಬೇಕಾದ ಎಲ್ಲ ರೀತಿಯ ಹಣಕಾಸು ಮತ್ತು ಇತರ ಕೆಲವು ನೆರವು ನೀಡಿದರು.ವಿದ್ಯಾರ್ಜನೆಗೆ ಮಹತ್ತರವಾದ ಈ ಕೊಡುಗೆ ಯಿಂದ ದೇಶದ ನೂರಾರು ವಿದ್ಯಾರ್ಥಿಗಳಿಗೆ ಜ್ಞಾನ ಪರೀಕ್ಷೆ ಸಾಂಗವಾಗಿ ನೆರವೇರಲುವಸಹಕಾರಿ ಆಗಿದೆ ಎಂದು ಹೇಳಿದರು
ಶ್ರೀ ಸತ್ಯಾತ್ಮತೀರ್ಥರದ್ದು ಮಠಾತೀತ ವ್ಯಕ್ತಿತ್ವ .ಸೋಸಲ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಅವರದ್ದು ಜ್ಞಾನಾತೀತ ವ್ಯಕ್ತಿತ್ವ . ಎರಡೂ ಮಹಾನ್ ವ್ಯಕ್ತಿತ್ವಗಳು ಇಂದು ಒಂದೇ ವೇದಿಕೆಯಲ್ಲಿ ಸಂಗಮವಾಗಿರುವುದು ಸಜ್ಜನರ ಅಹೋಭಾಗ್ಯ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಮಂಗಳವಾರ ನಡೆದ ಪರೀಕ್ಷೆಯಲ್ಲಿ ವ್ಯಾಸತೀರ್ಥ ವಿದ್ಯಾಪೀಠದ ವಿದ್ಯಾರ್ಥಿ ಸೌಮಿತ್ರಿ ಅವರು ನ್ಯಾಯ ಸುಧಾ ಪ್ರಥಮ ಅಧ್ಯಾಯ ಮತ್ತು ತರ್ಕ ತಾಂಡವ ಗ್ರಂಥದ ಕುರಿತು ವ್ಯಾಖ್ಯಾನವನ್ನು ನೀಡಿ ಪಂಡಿತರ ಪ್ರಶ್ನೆಗಳಿಗೆ ಉತ್ತರಿಸಿರು.
ಆಯಾಚಿತ ಶ್ರೀಶ ಅವರು ಚಂದ್ರಿಕಾ ಗ್ರಂಥದ ಪ್ರಥಮ ಅಧ್ಯಾಯದ ಪಾಠವನ್ನು ಸಮರ್ಪಣೆ ಮಾಡಿ ಸೂಕ್ತವಾಗಿ ನಿರೂಪಿಸಿ ವಿದ್ವಾಂಸರ ಪ್ರಶ್ನೆಗಳಿಗೆ ಸಮರ್ಥ ಉತ್ತರ ನೀಡಿದರು.
ಮುಂಬೈ ಸತ್ಯಧ್ಯಾನ ವಿದ್ಯಾಪೀಠದ ಕುಲಪತಿ ಮಾಹುಲಿ ವಿದ್ಯಾಸಿಂಹಾಚಾರ್ಯ, ಬೆಂಗಳೂರಿನ ಜಯತೀರ್ಥ ವಿದ್ಯಾಪೀಠದ ಪ್ರಾಚಾರ್ಯ ಸತ್ಯ ಧ್ಯಾನಚಾರ್ಯ ಕಟ್ಟಿ ಹಿರಿಯ ವಿದ್ವಾಂಸ ಮಹಾ ಮಹೋಪಾಧ್ಯಾಯ ಎ. ಹರಿದಾಸಭಟ್ಟ, ಪ್ರಹ್ಲಾದಾಚಾರ್ಯ ಜೋಷಿ, ಹೊನ್ನಾಳಿ ಸತ್ಯಬೋಧಾಚಾರ್ಯ, ಸತ್ಯ ಪ್ರಮೋದ ಕಟ್ಟಿ, ಧನಂಜಯ ಆಚಾರ್ಯ, ಮೈಸೂರಿನ ಹಿರಿಯ ವಿದ್ವಾನ್ ಎಚ್. ವಿ. ನಾಗರಾಜ ರಾವ್, ಡಾ. ಶ್ರೀ ನಿಧಿ ಪ್ಯಾಟಿ, ಜ ಮಾತರಿಶ್ವಾಚಾರ್ಯ, ವಿದ್ಯಾ ಪೀಠದ ಗೌರವ ಕಾರ್ಯದರ್ಶಿ ಡಾ. ಡಿ. ಪಿ. ಮಧುಸೂದನಾಚಾರ್ಯ ಇತರರು ಹಾಜರಿದ್ದರು.
ಸೋಸಲೆ ಶ್ರೀ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.