ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಡ್ಯ ಜಿಲ್ಲೆಯ ಸಂಸದನಾಗಿ ಶತಮಾನದಿಂದ ಎಡಬಿಡದೆ ಕಾಡುತ್ತಿರುವ ಕಾವೇರಿ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಲೋಕಸಭೆ ಚುನಾವಣೆಯಲ್ಲಿ ಜಯಗಳಿಸಿದ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಕಾವೇರಿ ನದಿ ನೀರಿನ ಸಮಸ್ಯೆಗೆ ಯಾವ ರೀತಿ ಪರಿಹಾರ ಕಂಡುಕೊಳ್ಳಬೇಕು ಎಂಬ ಬಗ್ಗೆ ದೇವೇಗೌಡರಿಂದ ಸಲಹೆ ಪಡೆಯುತ್ತೇನೆ. ಅವರ ಸಲಹೆಯಂತೆ ನಡೆದು ಸಮಸ್ಯೆ ಇತ್ಯರ್ಥಗೊಳಿಸುವುದಕ್ಕೆ ಅಧಿಕಾರವನ್ನು ಮುಡಿಪಾಗಿಡುತ್ತೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಇದು ನನ್ನ ಗೆಲವು ಎನ್ನುವುದಕ್ಕಿಂತ ಮಂಡ್ಯ ಜಿಲ್ಲೆಯ ಜನರ ಗೆಲವು. ಈ ಚುನಾವಣೆಯ ಜವಾಬ್ದಾರಿಯನ್ನು ಜೆಡಿಎಸ್- ಜೆಡಿಎಸ್ ನಾಯಕರು ವಹಿಸಿಕೊಂಡಿದ್ದರು. ಅವರ ಶ್ರಮ ನನ್ನ ಗೆಲುವಿಗೆ ಕಾರಣ. ಇದರ ಫಲ ಜನತೆಗೆ ತಲುಪಬೇಕು ಜಿಲ್ಲೆಯ ಜನರ ಋಣ ನನ್ನ ಮೇಲಿದೆ. ನನಗೆ ಸಿಕ್ಕಿರುವ ಅವಕಾಶವನ್ನು ಜನರ ಸಮಸ್ಯೆ ಪರಿಹರಿಸುವುದಕ್ಕೆ ಬಳಸುವುದಾಗಿ ಅಭಯ ನೀಡಿದರು.
ಚುನಾವಣೆಯಲ್ಲಿ ನನ್ನ ಗೆಲುವಿಗೆ ಯಾವುದೋ ಒಂದು ಅಂಶ ಕಾರಣವಾಗಿಲ್ಲ. ಎಲ್ಲ ಅಂಶಗಳು ಗೆಲುವಿಗೆ ಕಾರಣವಾಗಿವೆ. ಪಕ್ಷ ಬೇಧ ಮರೆತು ಎಲ್ಲರೂ ಒಟ್ಟಿಗೆ ಕೆಲಸ ಮಾಡಿದ್ದಾರೆ. ಎಲ್ಲರ ತೀರ್ಮಾನಕ್ಕೆ ಬದ್ದರಾಗಿ ಅವರ ಆಶಯದಂತೆ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಆಗಿದ್ದೆ. ನನ್ನ ರಾಜಕೀಯ ಭವಿಷ್ಯವನ್ನು ಬೆಂಗಳೂರು ಗ್ರಾಮಾಂತರ ನಿರ್ಧಾರ ಮಾಡಿತ್ತು. ಈಗ ಮಂಡ್ಯ ಸೇರಿ ಎರಡು ಜಿಲ್ಲೆಯ ಜನರು ನನಗೆ ರಾಜಕೀಯ ಶಕ್ತಿ ಕೊಟ್ಟಿದ್ದಾರೆ. ರಾಜ್ಯದ ಜನರ ನಿರೀಕ್ಷೆಯಂತೆ ಕೆಲಸ ಮಾಡುತ್ತೇನೆ ಎಂದರು.
ಮಂಡ್ಯದ ಜೆಡಿಎಸ್ ಅಭ್ಯರ್ಥಿ ಅಂತ ಇಲ್ಲಿ ಇರಲೇ ಇಲ್ಲ. ಇಲ್ಲಿನ ಜನರು ನನ್ನನ್ನು ಪ್ರಚಾರಕ್ಕೆ ಕಳುಹಿಸಿದ್ದರು. ಜನರು ನನ್ನ ಮೇಲಿಟ್ಟಿದ್ದ ವಿಶ್ವಾಸದಿಂದ ರಾಜ್ಯದ ಹಲವು ಕಡೆ ಪ್ರಚಾರ ಮಾಡಿದ್ದೇನೆ. ಇದರಿಂದ ಜೆಡಿಎಸ್-ಬಿಜೆಪಿ ಮೈತ್ರಿಕೂಟ 19 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಕ್ಷೇತ್ರದ ಜನರು ಸಹಕರಿಸಿದರು. ಆದರೂ ಸಂಪೂರ್ಣ ಸಂತೃಪ್ತಿ ಸಿಕ್ಕಿಲ್ಲ ಎಂದು ನುಡಿದರು.