ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ I.N.D.I.A ಮೈತ್ರಿಕೂಟದ ನಾಯಕರು ಸಭೆ ನಡೆಸಿದರು.
ಎನ್‌ಡಿಎ ಮೈತ್ರಿಕೂಟ ಸರ್ಕಾರ ರಚನೆಯಾದ ಬಳಿಕ ಪ್ರಬಲ ಪ್ರತಿಪಕ್ಷವಾಗಿ ಕೆಲಸ ಮಾಡುವುದು, I.N.D.I.A ಒಕ್ಕೂಟದ ಸದಸ್ಯ ಪಕ್ಷಗಳ ಮಧ್ಯೆ ಸಮನ್ವಯತೆ, ಒಗ್ಗಟ್ಟು ಸಾಧಿಸುವುದು, ರಚನೆಯಾದ ನೂತನ ಸರ್ಕಾರದ ವಿರುದ್ಧ ಹೋರಾಡುವುದು, ಅದನ್ನು ಇಕ್ಕಟ್ಟಿಗೆ ಸಿಲುಕಿಸುವುದು, ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸುವುದು ಸೇರಿ ಹಲವು ರಣತಂತ್ರಗಳ ಕುರಿತು ಚರ್ಚಿಸಲಾಗಿದೆ.
ಸಭೆಯಲ್ಲಿ ಮಾತನಾಡಿದ ಖರ್ಗೆ, ನಾವು ಉತ್ತಮವಾಗಿ ಹೋರಾಡಿದ್ದೇವೆ. ಒಗ್ಗಟ್ಟಿನಿಂದ ಹೋರಾಡಿದ್ದೇವೆ, ದೃಢವಾಗಿ ಹೋರಾಡಿದ್ದೇವೆ ಎಂದು ತಿಳಿಸಿದರು.
ನಮ್ಮ ಸಂವಿಧಾನ ಮತ್ತು ಅದರ ಮುನ್ನುಡಿಯಲ್ಲಿ ಪ್ರತಿಪಾದಿಸಿರುವ ಮೌಲ್ಯಗಳಿಗೆ ತನ್ನ ಮೂಲಭೂತ ಬದ್ಧತೆಯನ್ನು ಹಂಚಿಕೊಳ್ಳುವ ಎಲ್ಲಾ ಪಕ್ಷಗಳನ್ನು I.N.D.I.A ಒಕ್ಕೂಟವು ಸ್ವಾಗತಿಸುತ್ತದೆ. ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನ್ಯಾಯಕ್ಕಾಗಿ ಹೋರಾಡಿದ್ದೆವು. ಜನಾದೇಶವು ನಿರ್ಣಾಯಕವಾಗಿದೆ ಎಂದರು.
ಮೋದಿ ವಿರುದ್ಧ ಮತ್ತು ಅವರ ರಾಜಕೀಯದ ಶೈಲಿಗೆ ಸ್ಪಷ್ಟವಾದ ನೈತಿಕ ಸೋಲು ಇದು. ಇದರ ಹೊರತಾಗಿ ಮೋದಿಗೆ ದೊಡ್ಡ ರಾಜಕೀಯ ನಷ್ಟವಾಗಿದೆ. ಅವರು ಜನರ ಇಚ್ಛೆಯನ್ನು ಬುಡಮೇಲು ಮಾಡಲು ನಿರ್ಧರಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಒಕ್ಕೂಟದ ನಾಯಕರ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಶರದ್ ಪವಾರ್ ಮತ್ತು ಸುಪ್ರಿಯಾ ಸುಳೆ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷವನ್ನು (ಎನ್‌ಸಿಪಿ) ಪ್ರತಿನಿಧಿಸಿದರೆ, ಎಂ.ಕೆ. ಸ್ಟಾಲಿನ್ ಮತ್ತು ಟಿ.ಆರ್.ಬಾಲು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ)ಯಿಂದ ಭಾಗವಹಿಸಿದ್ದರು. ಸಮಾಜವಾದಿ ಪಕ್ಷದಿಂದ (SP) ಅಖಿಲೇಶ್ ಯಾದವ್ ಮತ್ತು ರಾಮಗೋಪಾಲ್ ಯಾದವ್, ಶಿವಸೇನಾ (UBT) ನಿಂದ ಅರವಿಂದ್ ಸಾವಂತ್, ಮತ್ತು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (AITC) ಯಿಂದ ಅಭಿಷೇಕ್ ಬ್ಯಾನರ್ಜಿ ಭಾಗಿಯಾಗಿದ್ದಾರೆ.ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) (ಸಿಪಿಐ(ಎಂ)), ಆಮ್ ಆದ್ಮಿ ಪಾರ್ಟಿ (ಎಎಪಿ), ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ನಂತಹ ಇತರ ಪಕ್ಷಗಳ ಪ್ರತಿನಿಧಿಗಳೂ ಈ ಸಭೆಯಲ್ಲಿ ಉಪಸ್ಥಿತರಿದ್ದರು.