ಹೊಸದಿಗಂತ ಡಿಜಿಟಲ್ ಡೆಸ್ಕ್:
ಹವಾಮಾನ ವೈಪರೀತ್ಯದಿಂದಾಗಿ ಉತ್ತರಾಖಂಡದಲ್ಲಿ ಪ್ರಾಣ ಕಳೆದುಕೊಂಡ ಕರ್ನಾಟಕದ ಒಂಬತ್ತು ಚಾರಣಿಗರ ಮೃತದೇಹಗಳನ್ನು ಇಂದು ದೆಹಲಿ ಮೂಲಕ ಬೆಂಗಳೂರಿಗೆ ತರಲಾಗುವುದು.
ಮೇ 29 ರಂದು ಉತ್ತರಕಾಶಿಯಿಂದ 35 ಕಿಮೀ ದೂರದ ಚಾರಣಕ್ಕೆ 22 ಸದಸ್ಯರ ಟ್ರೆಕ್ಕಿಂಗ್ ತಂಡವನ್ನು ಮನೇರಿಯ ಹಿಮಾಲಯನ್ ವ್ಯೂ ಟ್ರೆಕ್ಕಿಂಗ್ ಏಜೆನ್ಸಿಯಿಂದ ಕಳುಹಿಸಲಾಗಿತ್ತು. ಈ ತಂಡದಲ್ಲಿ ಕರ್ನಾಟಕದ 18 ಚಾರಣಿಗರು ಮತ್ತು ಮಹಾರಾಷ್ಟ್ರದ ಓರ್ವರ ಜೊತೆಗೆ ಮೂವರು ಸ್ಥಳೀಯ ಮಾರ್ಗದರ್ಶಕರಿದ್ದರು.
ಡೆಹ್ರಾಡೂನ್ ವಿಮಾನ ನಿಲ್ದಾಣದಿಂದ ಎಲ್ಲಾ ಒಂಬತ್ತು ಮೃತದೇಹಗಳನ್ನು ಎಂಬಾಮಿಂಗ್ ಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ. ಎಂಬಾಮ್ ಮಾಡಿದ ನಂತರ ಮೃತದೇಹಗಳನ್ನು ದೆಹಲಿ ವಿಮಾನ ನಿಲ್ದಾಣಕ್ಕೆ ಆಂಬ್ಯುಲೆನ್ಸ್‌ಗಳಲ್ಲಿ ಸಾಗಿಸಲಾಗುವುದು. ನಾಳೆ ಬೆಳಿಗ್ಗೆ ದೆಹಲಿ-ಬೆಂಗಳೂರು ವಿಮಾನಗಳಲ್ಲಿ ಜಾಗವನ್ನು ಕಾಯ್ದಿರಿಸಲಾಗಿದೆ. ಮೃತರ ವಿವರಗಳನ್ನು ತಿಳಿಸುತ್ತೇವೆ ಎಂದು ತಿಳಿಸಿದ್ದಾರೆ. ಈ ಮಧ್ಯೆ ರಕ್ಷಿಸಲಾದ ಎಲ್ಲಾ 13 ಚಾರಣಿಗರು ಇಂದು ಸಂಜೆಯೊಳಗೆ ಬೆಂಗಳೂರು ತಲುಪುವ ಸಾಧ್ಯತೆಯಿದೆ ಎಂದು ಕೃಷ್ಣಭೈರೇಗೌಡ ಮಾಹಿತಿ ನೀಡಿದ್ದಾರೆ.