ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಕಾಶಿಯ ಸಹಸ್ರತಾಲ್‌ನ ಹಿಮದಡಿ ತಮ್ಮ ಸ್ನೇಹಿತರು ಕಣ್ಣೆದುರೇ ಉಸಿರುಚೆಲ್ಲಿದ್ದನ್ನು ಕಣ್ಣಾರೆ ಕಂಡು ಆಘಾತಕ್ಕೊಳಗಾಗಿರುವ 13 ಮಂದಿ ಚಾರಣಿಗರು ಬೆಂಗಳೂರಿಗೆ ವಾಪಾಸಾಗಿದ್ದಾರೆ.
ಚಾರಣಕ್ಕೆ ತೆರಳಿದ್ದವರ ಪೋಷಕರು, ಸ್ನೇಹಿತರು ಏರ್‌ಪೋರ್ಟ್‌ಗೆ ಆಗಮಿಸಿದ್ದು, ತಮ್ಮವರನ್ನು ಕಂಡು ಬೆಚ್ಚಗಿನ ಅಪ್ಪುಗೆ ನೀಡಿ ಸಂತೈಸಿದ್ದಾರೆ.
ರಕ್ಷಣೆಗೊಳಗಾದ ಚಾರಣಿಗರನ್ನು ಹೊತ್ತ ವಿಮಾನ ಡೆಹ್ರಾಡೂನ್‌ನಿಂದ ಬೆಂಗಳೂರಿನ ಕೆಐಎಯಲ್ಲಿ ರಾತ್ರಿ 8:46 ಕ್ಕೆ ಇಳಿಯಬೇಕಿತ್ತು. ಆದರೆ, 30 ನಿಮಿಷಗಳಷ್ಟು ತಡವಾಗಿ ರಾತ್ರಿ 9:20 ಕ್ಕೆ ಬಂದಿಳಿಯಿತು. ಈ ವೇಳೆ ಕುಟುಂಬಸ್ಥರು ಹಾಗೂ ಸಂಬಂಧಿಕರು ಸಾಕಷ್ಟು ಆತಂಕಕ್ಕೊಳಗಾಗಿದ್ದರು. ರಾತ್ರಿ 10 ಗಂಟೆ ವೇಳೆ ತಮ್ಮನ್ನು ನೋಡಿದ ಕೂಡಲೇ ನಿಟ್ಟುಸಿರು ಬಿಟ್ಟರು.
ಬದುಕುಳಿದವರ ಜೊತೆಗಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಾತನಾಡಿ, 13 ಮಂದಿ ದೈಹಿಕವಾಗಿ ಆರೋಗ್ಯವಾಗಿದ್ದರೂ ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದಾರೆ ಎಂದು ಹೇಳಿದ್ದಾರೆ.