ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ ಹತ್ತು ವರ್ಷಗಳ ಕಾಲ ನಾವೇ ಆಡಳಿತದಲ್ಲಿದ್ದು, ಅತ್ಯುತ್ತಮ ಆಡಳಿತ ನೀಡಲಿದ್ದೇವೆ ಎಂದು ನರೇಂದ್ರ ಮೋದಿ ಹೇಳಿದರು.
ನೂತನ ಎನ್‌ಡಿಎ ಸಂಸದರ ಸಭೆಯಲ್ಲಿ, ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಬಳಿಕ ಅವರು ಸಂಸದರನ್ನು ಉದ್ದೇಶಿಸಿ ಮಾತನಾಡಿದರು.
ಭಾರತದ ಜನತೆಯ ಸ್ಥಳೀಯ ಆಸೆ ಆಕಾಂಕ್ಷೆಗಳು, ರಾಷ್ಟ್ರೀಯ ಆಸೆ ಆಕಾಂಕ್ಷೆಗಳನ್ನು ಜತೆಗೆ ಜೋಡಿಸಿ ನಾವು ಈಡೇರಿಸಬೇಕಾಗಿದೆ. ಈ ಚುನಾವಣೆಯಲ್ಲಿ ದಕ್ಷಿಣ ಭಾರತದಲ್ಲಿ ಎನ್‌ಡಿಎ ನೂತನ ರಾಜನೀತಿಯೊಂದನ್ನು ತೆರೆದಿದೆ. ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಅವರ ಸರಕಾರವಿದೆ. ಆದರೆ ಅಲ್ಲಿನ ಜನರು ಎನ್‌ಡಿಎಯನ್ನು ಅಪ್ಪಿಕೊಂಡಿದ್ದಾರೆ. ತಮಿಳುನಾಡು ತಂಡಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಅಲ್ಲಿನ ಜನರು ನಮ್ಮ ಧ್ವಜವನ್ನು ಎತ್ತಿ ಹಿಡಿಯಲು ಹೋರಾಡಿದರು. ಅಲ್ಲಿ ನಮ್ಮ ಮತಪ್ರಮಾಣ ಹೆಚ್ಚಿದೆ. ಅಲ್ಲಿ ನಾಳೆ ಭವಿಷ್ಯದಲ್ಲಿ ಏನು ಬರೆದಿದೆ ಎಂಬುದನ್ನು ನಾನು ಈಗಲೇ ಹೇಳಬಲ್ಲೆ. ಕೇರಳದಲ್ಲಿ ನಮ್ಮ ಎಷ್ಟೋ ಕಾರ್ಯಕರ್ತರು ಬಲಿದಾನ ಮಾಡಿದ್ದಾರೆ. ಅಲ್ಲಿಂದ ಮೊದಲ ಬಾರಿಗೆ ಒಬ್ಬ ನಮ್ಮ ಸಂಸದರು ಆರಿಸಿ ಬಂದಿದ್ದಾರೆ. ಅರುಣಾಚಲ ಪ್ರದೇಶ, ಸಿಕ್ಕಿಂನಲ್ಲಿ ನಾವು ಸರಕಾರ ರಚಿಸಿದ್ದೇವೆ ಎಂದು ಅವರು ಹೇಳಿದರು.
ಆಂಧ್ರಪ್ರದೇಶದಿಂದ 16 ಸಂಸದರನ್ನು ತಂದ ಚಂದ್ರಬಾಬು ನಾಯ್ಡು ಅವರನ್ನು ಮೋದಿ ಶ್ಲಾಘಿಸಿದರು. ಪವನ್ ಕಲ್ಯಾಣ್ ಅವರು ʼಪವನʼ ಅಲ್ಲ ʼಬಿರುಗಾಳಿʼ ಎಂದು ಅವರು ಚಟಾಕಿ ಹಾರಿಸಿದರು.
ಕಾಂಗ್ರೆಸ್ ನಡವಳಿಕೆಯನ್ನು ಟೀಕಿಸಿದ ಅವರು, ಅವರ ಪಕ್ಷದ ಪ್ರಧಾನಿಯನ್ನೇ ಅವರು ಅವಮಾನಕ್ಕೊಳಪಡಿಸುತ್ತಿದ್ದರು. ಅವರ ಪಕ್ಷದ ಪ್ರಧಾನಿ ಹೊರಗೆ ಹೋದಾಗ ಕುಳಿತುಕೊಳ್ಳಲು ಆಸನ ಇರುತ್ತಿರಲಿಲ್ಲ. ಅಂಥ ಸ್ಥಿತಿಯಿಂದ ಬಂದಿದ್ದರೂ ಈಗಲೂ ತಮ್ಮ ಗೌರವ ಉಳಿಸಿಕೊಳ್ಳುವುದು ಅವರಿಗೆ ಗೊತ್ತಿಲ್ಲ ಎಂದು ಅವರು ಚಾಟಿ ಬೀಸಿದರು. ಹೀಗಿದ್ದರೂ, ಪ್ರತಿಪಕ್ಷದ ಸಂಸದರು ಸದನಕ್ಕೆ ಬಂದು ಕಲಾಪಗಳಲ್ಲಿ ಭಾಗವಹಿಸುತ್ತಾರೆ ಎಂಬುದು ನನ್ನ ವಿಶ್ವಾಸ ಎಂದರು.
ಭಾರತದಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ಬಗ್ಗೆ ಮೋದಿ ಲೇವಡಿ ಮಾಡಿದರು. 10 ವರ್ಷಗಳ ಬಳಿಕವೂ ಅವರು ಪಾಠ ಕಲಿತಿಲ್ಲ. ಕಾಂಗ್ರೆಸ್ ಹಿಂದಿನ ಮೂರೂ ಚುನಾವಣೆಗಳಲ್ಲಿ ಗೆದ್ದ ಸೀಟುಗಳನ್ನು ಸೇರಿಸಿದರೂ ಈ ಸಲ ಬಿಜೆಪಿ ಗೆದ್ದು ಸೀಟುಗಳಷ್ಟು ಆಗಲಾರದು ಎಂದರು. ಕಳೆದ 10 ವರ್ಷಗಳಲ್ಲಿ ಕಾಂಗ್ರೆಸ್ ಸದನದಲ್ಲಿ ಒಳ್ಳೆಯ ಚರ್ಚೆಗಳನ್ನೇ ಮಾಡಿಲ್ಲ. ಅದಕ್ಕಾಗಿಯೇ ಪ್ರತಿಪಕ್ಷದಲ್ಲೇ ಕುಳಿತುಕೊಳ್ಳಿ ಎಂದು ಜನ ದಾರಿ ತೋರಿಸಿದ್ದಾರೆ ಎಂದರು.
NDA ಎಂದರೆ New ಇಂಡಿಯಾ, Develop ಇಂಡಿಯಾ, Aspirational ಇಂಡಿಯಾ ಎಂದು ಮೋದಿ ನುಡಿದರು. ಚುನಾವಣೆ ವೇಳೆ ಹೇಳಿದಂತೆ ಜನರ ಕೆಲಸಕ್ಕೆ ನಾವು ಸಿದ್ಧ. ಎನ್‌ಡಿಎ ಅಲ್ಲದೆ ಬೇರೆ ಯಾರ ಮೇಲೂ ಜನತೆಗೆ ವಿಶ್ವಾಸವಿಲ್ಲ. ಭ್ರಷ್ಟಾಚಾರಮುಕ್ತ ಆಡಳಿತ ನೀಡುವುದೇ ನಮ್ಮ ಗುರಿ. ಇದುವರೆಗಿನ 10 ವರ್ಷಗಳ ಆಡಳಿತ ಬರೀ ಟ್ರೇಲರ್ ಎಂದರು. ಮೂಲಸೌಕರ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಭಾರೀ ಬದಲಾವಣೆಗೆ ಎನ್‌ಡಿಎ ಮುನ್ನುಡಿ ಬರೆದಿದೆ. ಇನ್ನಷ್ಟು ಸಾಧಿಸಿ ತೋರಿಸಲಿದೆ ಎಂದರು. .