ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಹಳೆ ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಶುಕ್ರವಾರ ನಡೆದ ಎನ್‌ಡಿಎ ಸಂಸದೀಯ ಸಭೆಯಲ್ಲಿ ನಿತೀಶ್ ಕುಮಾರ್ ಅವರು ಮೋದಿ ಕಾಲಿಗೆ ನಮಸ್ಕರಿಸಲು ಮುಂದಾಗಿದ್ದು, ಈ ವೇಳೆ ಮೋದಿಯವರು ನಿತೀಶ್ ಅವರನ್ನು ತಡೆಯುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸಭೆಯಲ್ಲಿ ಇಂದು ಪ್ರಧಾನಿ ಸ್ಥಾನಕ್ಕೆ ಅನುಮೋದನೆ ನೀಡಲಾಯಿತು. ಸಭೆಯಲ್ಲಿದ್ದ ಘಟಾನುಘಟಿ ನಾಯಕರೆಲ್ಲರೂ ನರೇಂದ್ರ ಮೋದಿಯವರ ಹೆಸರನ್ನೇ ಪ್ರಧಾನಿ ಸ್ಥಾನಕ್ಕೆ ಅನುಮೋದಿಸಿದರು. ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜೆಡಿಯು ವರಿಷ್ಠ ನಿತೀಶ್ ಕುಮಾರ್ ಅವರು ತನ್ನ ಮಾತುಗಳಿಂದ ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದರು.
ಬಳಿಕ ನಿತೀಶ್ ಕುಮಾರ್ ಅವರು ಕೈ ಮುಗಿಯುತ್ತಲೇ ನರೇಂದ್ರ ಮೋದಿಯವರ ಬಳಿ ತೆರಳುತ್ತಾರೆ. ನಂತರ ಮೋದಿ ಕಾಲಿಗೆ ನಮಸ್ಕರಿಸಲು ಪ್ರಯತ್ನಿಸುತ್ತಾರೆ. ಈ ವೇಳೆ ಮೋದಿಯವರು ನಿತೀಶ್ ಅವರನ್ನು ತಡೆಯುತ್ತಾರೆ. ಇದಾದ ಬಳಿಕ ಇಬ್ಬರೂ ಒಬ್ಬರಿಗೊಬ್ಬರು ಸಮಸ್ಕರಿಸುತ್ತಾ ಹಸ್ತಲಾಘವ ಮಾಡುತ್ತಾರೆ. ಇದರ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.