ಹೊಸದಿಗಂತ ಡಿಜಿಟಲ್ ಡೆಸ್ಕ್:
“ಅರಸೀಕೆರೆ ಕ್ಷೇತ್ರಕ್ಕೆ ನಿಮ್ಮ ಕೊಡುಗೆಯಾದರೂ ಏನು? ತಾಕತ್ತಿದ್ದರೆ ಇಲ್ಲಿ ಬಂದು ಸ್ಪರ್ಧಿಸಿ, ಜನರೇ ನಿಮಗೆ ಪಾಠ ಕಲಿಸುತ್ತಾರೆ” ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರಿಗೆ ನೇರ ಸವಾಲು ಹಾಕಿದ್ದಾರೆ.
ಅರಸೀಕೆರೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿ ಮಾತನಾಡಿದ ಅವರು, ಜೆಡಿಎಸ್ ಮುಖಂಡರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ನಾನು ರೈತನ ಮಗ, ಕಷ್ಟಪಟ್ಟು ರಾಜಕೀಯದಲ್ಲಿ ಬೆಳೆದು ನಾಲ್ಕು ಬಾರಿ ಶಾಸಕನಾಗಿದ್ದೇನೆ. ಐವತ್ತು ಜನರನ್ನು ಕರೆತಂದು ಇಲ್ಲಿ ಅಬ್ಬರ ಮಾಡಿದರೆ ಅರಸೀಕೆರೆ ಜನ ಹೆದರುವುದಿಲ್ಲ,” ಎಂದರು.
ಹಳೆಯ ಘಟನೆಗಳನ್ನು ಸ್ಮರಿಸಿದ ಶಿವಲಿಂಗೇಗೌಡರು, “ಅರಸೀಕೆರೆಗೆ ಮಂಜೂರಾಗಿದ್ದ ಇಂಜಿನಿಯರಿಂಗ್ ಕಾಲೇಜನ್ನು ರಾತ್ರೋರಾತ್ರಿ ಮೊಸಳೆಹೊಸಳ್ಳಿಗೆ ವರ್ಗಾಯಿಸಿಕೊಂಡು ಹೋದವರು ನೀವು. ಅಂದು ಅಶ್ವಥ್ ನಾರಾಯಣ್ ಅವರ ಕಾಲು ಹಿಡಿದು ಮತ್ತೆ ಕಾಲೇಜು ಮಂಜೂರು ಮಾಡಿಸಿಕೊಂಡು ಬಂದೆ. ಅರಸೀಕೆರೆಗೆ ನಿಮ್ಮ ಕೊಡುಗೆ ಶೂನ್ಯ,” ಎಂದು ಕಿಡಿಕಾರಿದರು.
“ಹಾಸನ ಜಿಲ್ಲೆಯಲ್ಲಿ ಕೇವಲ ಒಂದು ಕುಟುಂಬ ಮಾತ್ರ ಬೆಳೆಯಬೇಕೆ? ಬೇರೆಯವರು ರಾಜಕೀಯ ಮಾಡಬಾರದೇ?” ಎಂದು ಪ್ರಶ್ನಿಸಿದ ಅವರು, “ನಾನು ಜೆಡಿಎಸ್‌ನಲ್ಲಿದ್ದಾಗ ಅರಸೀಕೆರೆಯಲ್ಲಿ ಪಕ್ಷಕ್ಕೆ 85 ಸಾವಿರ ಮತಗಳನ್ನು ಕೊಡಿಸಿದ್ದೆ. ನಿಮ್ಮ ಮುಖ ನೋಡಿ ಮತಗಳು ಬಂದಿಲ್ಲ, ನನ್ನ ಕೆಲಸ ನೋಡಿ ಬಂದಿವೆ. ನಾನು ಕಾಂಗ್ರೆಸ್‌ಗೆ ಕದ್ದುಮುಚ್ಚಿ ಹೋಗಿಲ್ಲ, ಬಹಿರಂಗವಾಗಿಯೇ ಬಂದಿದ್ದೇನೆ,” ಎಂದು ಸ್ಪಷ್ಟಪಡಿಸಿದರು.

