ಹೊಸದಿಗಂತ ಡಿಜಿಟಲ್ ಡೆಸ್ಕ್:
ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ನರೇಂದ್ರ ಮೋದಿಯವರ ನಾಯಕತ್ವವನ್ನು ಮೆಚ್ಚಿ ಮಾತನಾಡಿದ್ದಾರೆ.
ನರೇಂದ್ರ ಮೋದಿ ಅವರಿಗೆ ಪಕ್ಷದ ಪರವಾಗಿ ಧನ್ಯವಾದ ಅರ್ಪಿಸಿದ ಪವನ್ ಕಲ್ಯಾಣ್, ನರೇಂದ್ರ ಮೋದಿ ಅವರು 15 ವರ್ಷಗಳ ಕಾಲ ಪ್ರಧಾನಿಯಾಗಿರುತ್ತಾರೆ ಎಂದು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಹೇಳಿದ್ದನ್ನು ನೆನಪಿಸಿಕೊಂಡರು. ಚಂದ್ರಬಾಬೂಜೀ ನಿಮ್ಮ ಭವಿಷ್ಯ ನಿಜವಾಯಿತು ಎಂದು ಈ ಸಂದರ್ಭ ಹೇಳಿದರು.
ಮೋದಿಜೀ ನೀವು ನಿಜವಾಗಿಯೂ ರಾಷ್ಟ್ರಕ್ಕೆ ಸ್ಫೂರ್ತಿ ನೀಡಿದ್ದೀರಿ. ನೀವು ದೇಶದ ಪ್ರಧಾನಿಯಾಗಿರುವವರೆಗೆ ನಮ್ಮ ದೇಶವು ಯಾರಿಗೂ ಎಂದಿಗೂ ತಲೆಬಾಗುವುದಿಲ್ಲ. ನಿಮ್ಮ ನಾಯಕತ್ವದಲ್ಲಿ ಪ್ರಬಲವಾದ ಹಿಮಾಲಯವು ಎಂದಿಗೂ ತಲೆಬಾಗುವುದಿಲ್ಲ. ಭಾರತವು ಎಂದಿಗೂ ತಲೆಬಾಗುವುದಿಲ್ಲ ಮತ್ತು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಕಾಮಾಕ್ಯದಿಂದ ದ್ವಾರಕಾದವರೆಗೆ ನಿಮ್ಮ ನಾಯಕತ್ವದಲ್ಲಿ ಕೆಲಸ ಮಾಡಲು ನಾವು ನಿಜವಾಗಿಯೂ ಹೆಮ್ಮೆಪಡುತ್ತೇವೆ ಎಂದರು.
ನಿಮ್ಮ ಹಿಂದೆ ನಾವೆಲ್ಲರೂ ಸೇರುತ್ತೇವೆ. ದೇಶ ಸೇವೆ ಮಾಡಲು ನೀವು ನಮ್ಮನ್ನು ಪ್ರೇರೇಪಿಸಿದ ರೀತಿ ಮತ್ತು ನಿಮ್ಮ ನಡೆ- ನುಡಿ, ನೀವು ನಮಗೆ ತೋರಿದ ಅಭಿವೃದ್ಧಿಯ ರೀತಿಯಿಂದ ದೇಶಪ್ರೇಮ ನಮ್ಮಲ್ಲಿ ಮೂಡಿದೆ ಎಂದು ಹೇಳಿದರು.
ನಿಮ್ಮ ಮಾರ್ಗದರ್ಶನ ಮತ್ತು ಬೆಂಬಲದ ಅಡಿಯಲ್ಲಿ ಈ ಗೆಲುವು ಸಾಧ್ಯವಾಯಿತು. ನಾವೆಲ್ಲರೂ ನಿಮಗೆ ಆಭಾರಿಯಾಗಿದ್ದೇವೆ ಎಂದು ತಿಳಿಸಿದರು.