ಹೊಸದಿಗಂತ ವರದಿ,ಮೈಸೂರು:
ವಿಷಕಾರಿ ಅನಿಲ ಸೋರಿಕೆಯಾಗಿ 20 ಮಂದಿ ಅಸ್ವಸ್ಥಗೊಂಡಿರುವ ಘಟನೆ ಮೈಸೂರಿನ ಹಳೇ ಕೆಸರೆಯ ಗುಜರಿ ಗೋದಾಮಿನಲ್ಲಿ ನಡೆದಿದೆ.
ಪ್ರೇಮಾ, ಭಾವನ, ಪನವ, ಚಿಹತ್, ಚೈತನ್ಯ, ಭಾಸ್ಕರ್, ನಂದನ, ವಿದ್ಯಾಶ್ರೀ, ದಿಯಾ, ಶ್ವೇತಾ, ಜಲಿಲೀಯಾ, ಗೌರಮ್ಮ, ನಾಗರಾಜು, ವಿಜಯಲಕ್ಷ್ಮಿ, ಜ್ಯೋತಿ ವಾಣಿ, ನೇತ್ರಾವತಿ, ದೀಪ್ತಿ, ವಿಶಾಲಕ್ಷ್ಮಿ, ಸೋನಿಯಾ ಎಂಬುವರು ಕೆಮ್ಮು, ಉಸಿರಾಟದ ತೊಂದರೆಯಿoದಾಗಿ ಅಸ್ವಸ್ಥಗೊಂಡಿದ್ದಾರೆ.
ಅವರನ್ನು ನಗರದ ವಿವಿಧ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅಸ್ವಸ್ಥಗೊಂಡವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಷಯ ತಿಳಿದು ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದವರು ವಿಷಾನಿಲ ಸೋರಿಕೆಯನ್ನು ತಡೆಗಟ್ಟಿ, ಹೆಚ್ಚಿನ ಅನಾಹುತವನ್ನು ತಪ್ಪಿಸಿದರು.
ಪೊಲೀಸರು ಭೇಟಿ ನೀಡಿ, ಮುನ್ನೇಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಗೋದಾಮಿನಲ್ಲಿ ವಿಷಕಾರಿ ಅನಿಲ ಸೋರಿಕೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ.ವರುಣ ಕಾಲುವೆ ಬಳಿ ಇರುವ ‘ರಿದಾ ಸ್ಟೀಲ್ ಟ್ರೇಡರ್ಸ್’ ಗುಜರಿ ಅಂಗಡಿಯಲ್ಲಿದ್ದ ಹಳೆ ಸಿಲಿಂಡರ್‌ಗಳನ್ನು ತುಂಡು ಮಾಡುವಾಗ ಒಂದರಲ್ಲಿ ಕ್ಲೋರಿನ್ ಅನಿಲವಿದ್ದರಿಂದ ಸೋರಿಕೆ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾವಣಗೆರೆಯಿಂದ ಈ ಗುಜರಿ ಸಾಮಗ್ರಿಗಳನ್ನು ಮೂರು ತಿಂಗಳ ಹಿಂದೆ ಅಂಗಡಿ ಮಾಲೀಕರು ಖರೀದಿಸಿದ್ದರು. ಸಂಜೆ ಸಿಲಿಂಡರ್ ತುಂಡು ಮಾಡುವಾಗ ಅನಿಲ ಹೊರಬಂದಿದೆ. ಸುತ್ತಮುತ್ತಲಿನ ವಾಸದ ಮನೆಗಳಿಗೆ ಹರಡಿದೆ. ಇದರಿಂದಾಗಿ ಈ ಘಟನೆ ನಡೆದಿದೆ ಹೇಳಿದ್ದಾರೆ.