ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆಯಲ್ಲಿ ವಿವಿಧ ಭಾಗಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸೋಲಾಗಿದ್ದು, ಹೀಗಾಗಿ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸುವ ವಿಚಾರದ ಕುರಿತು ಕಾಂಗ್ರೆಸ್ ನಾಯಕರಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ವಿಚಾರದ ಕುರಿತಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಕರ್ನಾಟಕ ಸರ್ಕಾರ ಜಾರಿ ಮಾಡಿರುವ ಐದು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಕರ್ನಾಟಕ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ರಾಜಕೀಯ ದೃಷ್ಟಿಕೋನದಿಂದ ಗ್ಯಾರಂಟಿ ಯೋಜನೆ ಜಾರಿ ಮಾಡಿಲ್ಲ. ಗ್ಯಾರಂಟಿ ಯೋಜನೆ ಜಾರಿಯಿಂದ ಪಕ್ಷಕ್ಕೆ ಲಾಭವಾಗಬಹುದು ಎಂದು ತಿಳಿಸಿದರು.
ಬಡವರು ಕಾರ್ಮಿಕರು ಕೃಷಿ, ಕೆಲಸ ಮತ್ತು ಕೂಲಿ, ಕೆಲಸ ಮಾಡುವವರು ಗ್ರಾಮಾಂತರ ಭಾಗದ ಜನರ ಹಿತದೃಷ್ಟಿಯಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಬಡತನ ರೇಖೆಗಿಂತ ಕೆಳಗಿರುವವರನ್ನು ಮೇಲೆತ್ತಲು ಗ್ಯಾರಂಟಿ ಜಾರಿ ಮಾಡಲಾಗಿದೆ ಎಂದರು.
ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲವೆಂದು ನಾವು ಸ್ಪಷ್ಟಪಡಿಸಿದ್ದೇವೆ . ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಸೀಟ್ ಬಂದಿದೆ ಎಂದು ಗ್ಯಾರೆಂಟಿ ನಿಲ್ಲಿಸಲ್ಲ. ನಮ್ಮ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸಲಿದೆ ಎಂದು ತಿಳಿಸಿದರು.