ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಬಿಜು ಜನತಾದಳ ಪಕ್ಷವು (BJD) ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಆಪ್ತ, ಬಿಜೆಡಿ ನಾಯಕ ವಿ.ಕೆ. ಪಾಂಡಿಯನ್ ಅವರು ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದಿದ್ದಾರೆ.
ನವೀನ್ ಪಟ್ನಾಯಕ್ ಅವರಿಗೆ ನೆರವು ನೀಡಬೇಕು, ಅವರ ಜತೆ ನಿಲ್ಲಬೇಕು ಎಂಬ ಒಂದೇ ಕಾರಣದಿಂದ ನಾನು ರಾಜಕೀಯ ಪ್ರವೇಶಿಸಿದೆ. ಆದರೆ, ನಾನೀಗ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯಲು ತೀರ್ಮಾನಿಸಿದ್ದೇನೆ. ನನ್ನ ರಾಜಕೀಯ ಪಯಣದಲ್ಲಿ ಯಾರಿಗಾದರೂ ನೋವುಂಟು ಮಾಡಿದ್ದರೆ, ಅದಕ್ಕೆ ಕ್ಷಮೆಯಾಚಿಸುತ್ತೇನೆ. ಚುನಾವಣೆ ಪ್ರಚಾರದಲ್ಲಿ ನನ್ನ ವಿರುದ್ಧ ಅಭಿಯಾನ ಶುರುವಾಗಿ, ಅದು ಪಕ್ಷದ ಸೋಲಿಗೆ ಕಾರಣವಾಗಿದ್ದರೆ ಅದಕ್ಕೂ ಕ್ಷಮೆಯಾಚಿಸುತ್ತೇನೆ. ಬಿಜು ಪರಿವಾರಕ್ಕೂ ನಾನು ಕ್ಷಮೆ ಕೇಳುತ್ತೇನೆ ಎಂದು ವಿ.ಕೆ. ಪಾಂಡಿಯನ್ ಹೇಳಿದ್ದಾರೆ.
ನವೀನ್ ಪಟ್ನಾಯಕ್ ಅವರಿಗೆ ವಿ.ಕೆ. ಪಾಂಡಿಯನ್ ಅವರು ತುಂಬ ಆಪ್ತರಾಗಿದ್ದರು. ನವೀನ್ ಪಟ್ನಾಯಕ್ ಅವರ ವಯಸ್ಸಿನ ಕಾರಣದಿಂದಾಗಿ ವಿ.ಕೆ.ಪಾಂಡಿಯನ್ ಅವರೇ ಬಿಜೆಡಿಯ ಉತ್ತರಾಧಿಕಾರಿಯಾಗುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು.
ಒಡಿಶಾದಲ್ಲಿ ಈ ಬಾರಿ 147 ಸ್ಥಾನಗಳಲ್ಲಿ 78 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಬಿಜೆಡಿ ಕೇವಲ 51 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇನ್ನುಳಿದಂತೆ ಕಾಂಗ್ರೆಸ್ 14 ಕ್ಷೇತ್ರಗಳಲ್ಲಿ ಗೆದ್ದಿದೆ.
ಒಡಿಶಾದ 21 ಲೋಕಸಭೆ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲೂ ಬಿಜೆಡಿಯು ತೀವ್ರ ಮುಖಭಂಗ ಅನುಭವಿಸಿದೆ. 21 ಕ್ಷೇತ್ರಗಳ ಪೈಕಿ ಬಿಜೆಪಿಯು 20 ಕ್ಷೇತ್ರಗಳಲ್ಲಿ ಗೆದ್ದಿದ್ದರೆ, ಕಾಂಗ್ರೆಸ್ 1 ಕ್ಷೇತ್ರದಲ್ಲಿ ಗೆದ್ದಿದೆ. ಬಿಜೆಡಿ ಈ ಬಾರಿ ಒಂದೂ ಕ್ಷೇತ್ರ ಗೆದ್ದಿಲ್ಲ.