ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
“ಭಾರತದ ಪ್ರಧಾನ ಮಂತ್ರಿಯಾಗಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಈ ಹೊಸ ಅವಧಿಯಲ್ಲಿ ನಮ್ಮ ರಾಜ್ಯವು ತನ್ನ ಪಾಲು ಮತ್ತು ಬೆಂಬಲವನ್ನು ಪಡೆಯುತ್ತದೆ ಎಂಬ ಭರವಸೆಯನ್ನು ಕರ್ನಾಟಕದ ಜನರು ಎದುರು ನೋಡುತ್ತಿದ್ದಾರೆ” ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮ Xನಲ್ಲಿ, “3ನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು, ಕರುನಾಡಿನ ಅಭಿವೃದ್ಧಿ ಮತ್ತು ಹಿತಾಸಕ್ತಿಗಳನ್ನು ಗೌರವಿಸುವ ನಮ್ಮ ಸಂಕಲ್ಪದಲ್ಲಿ ನೀವು ನಮ್ಮೊಂದಿಗೆ ಸಹಕರಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ರಾಜ್ಯಗಳ ಒಕ್ಕೂಟ ವ್ಯವಸ್ಥೆಯ ಆಶಯಗಳನ್ನು ಎತ್ತಿ ಹಿಡಿಯುವ ಜೊತೆಗೆ ಸಮೃದ್ಧ ಕರ್ನಾಟಕದ ಮೂಲಕ ಬಲಿಷ್ಠ ಭಾರತವನ್ನು ನಿರ್ಮಿಸಲು ನಿಮ್ಮೊಂದಿಗೆ ಕೆಲಸ ಮಾಡುವ ದಿನಗಳನ್ನು ಎದುರು ನೋಡುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.