ಹೊಸದಿಗಂತ, ಮಂಗಳೂರು:
ಜಿಲ್ಲಾಡಳಿತ, ಪೊಲೀಸ್ ಇಲಾಖೆ, ರಕ್ಷಣಾ ಸಿಬ್ಬಂದಿಗಳ ಸತತ ಎಚ್ಚರಿಕೆಗಳ ನಡುವೆಯೂ ಉಡುಪಿ ಜಿಲ್ಲೆಯ ಕಡಲ ತೀರದಲ್ಲಿ ಪ್ರವಾಸಿಗರ ಹುಚ್ಚಾಟ ಮಿತಿಮೀರಿದೆ.
ಒಂದೆಡೆ ಮಳೆಯಾಗುತ್ತಿದ್ದರೆ ಇನ್ನೊಂದೆಡೆ ಕಡಲು ಪ್ರಕ್ಷುಬ್ಧಗೊಂಡಿದ್ದು, ಇದರ ಪರಿವಿಲ್ಲದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಸಮುದ್ರದ ಅಲೆಗಳ ಜೊತೆ ಆಟವಾಡುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.
ಭಾನುವಾರದ ಹಿನ್ನೆಲೆಯಲ್ಲಿ ಮಲ್ಪೆ ಬೀಚ್‌ನಲ್ಲಂತೂ ಪ್ರವಾಸಿಗರ ದಂಡೇ ನೆರೆದಿತ್ತು. ಮಾನ್ಸೂನ್ ಆರಂಭವಾಗಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತ ಬೀಚ್‌ಗೆ ಇಳಿಯದಂತೆ ನಿರ್ಬಂಧ ಹೇರಿದ್ದರೂ, ಕಡಲ ತೀರಗಳಲ್ಲಿ ಎಚ್ಚರಿಕೆ ಫಲಕ ಹಾಕಿದ್ದರೂ ಪ್ರವಾಸಿಗರು ಮಾತ್ರ ಇದ್ಯಾವುದೇ ಎಚ್ಚರಿಕೆಗೆ ಬೆಲೆಕೊಡದೆ ಬೀಚ್‌ನ ದಕ್ಷಿಣ ಭಾಗದಲ್ಲಿ ನೀರಿಗೆ ಇಳಿಯುತ್ತಿದ್ದಾರೆ.
ಯಾವುದೇ ಕ್ಷಣದಲ್ಲಿ ಕಡಲು ಉಕ್ಕೇರುವ ಸಾಧ್ಯತೆಯಿದ್ದು, ಕಡಲಿನ ಮಾಹಿತಿ ಇಲ್ಲದ ಪರವೂರಿನ ಪ್ರವಾಸಿಗರು ಅಲೆಗಳ ಜೊತೆ ಆಟವಾಡುವುದು ಸದ್ಯ ಅತ್ಯಂತ ಅಪಾಯಕಾರಿಯಾಗಿದೆ.