ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಧಾಮಂಗಳ ಸಮಾರೋಪ ಸಮಾರಂಭದಲ್ಲಿ ಲಕ್ಷ ಆವರ್ತಿ ವಾಯುಸ್ತುತಿ ಪಾರಾಯಣ ಸಂಘದಿಂದ ನೂರಾರು ಸಾತ್ವಿಕರಿಂದ ವಾಯು ಸ್ತುತಿ ಪಾರಾಯಣ, ಲೋಕ ಕಲ್ಯಾಣಕ್ಕಾಗಿ 1008 ಬಾರಿ ಸುಮಧ್ವ ವಿಜಯ ಪಾರಾಯಣ ಮತ್ತು 1008 ಬಾರಿ ಹರಿಕಥಾಮೃತಸಾರ ಪಾರಾಯಣ ಹಾಗೂ ಒಂದು ಕೋಟಿ ಬಾರಿ ಯಂತ್ರೋದ್ಧಾರಕ ಹನುಮತ್ ಸ್ತೋತ್ರ ಪಾರಾಯಣ ಸಮರ್ಪಣೆ ನೆರವೇರಿಯಿತು.
ಇದೇ ಸಂದರ್ಭ ಸದಾಚಾರ ಸ್ಮೃತಿ ಪಾರಾಯಣ ಸಮರ್ಪಣೆ , ಮಹಿಳೆಯರಿಂದ ಶ್ರೀ ಲಕ್ಷ್ಮಿ ಶೋಭಾನೆ ಮತ್ತು ಮಧ್ವನಾಮ ಸಹಿತ ಪಂಚರತ್ನ ಸುಳಾದಿಗಳ ಪಾರಾಯಣವು ನೆರವೇರಿದ್ದು ಬಹು ವಿಶೇಷವಾಗಿತ್ತು. ನಾಡಿನ ವಿವಿಧ ಭಾಗಗಳಿಂದ ಮತ್ತು ಹೊರರಾಜ್ಯಗಳಿಂದ ಬಂದಂತಹ ಭಕ್ತರು ಹಾಗೂ ವನಿತೆಯರು ಈ ಸೇವ ಕಾರ್ಯದಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದರು.
ಬೆಂಗಳೂರಿನ ಶ್ರೀವಾರಿ ಫೌಂಡೇಶನ್ ನಿಂದ ವೆಂಕಟೇಶಮೂರ್ತಿ ಅವರ ಸಾರಥ್ಯದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವ 3 ತಾಸುಗಳ ಕಾಲ ವಿಜೃಂಭಣೆಯಿಂದ ನೆರವೇರಿಯಿತು. ಸುಸಜ್ಜಿತವಾದ ವೇದಿಕೆಯಲ್ಲಿ ವಿಶೇಷ ಧ್ವನಿ ಬೆಳಕು ಮತ್ತು ಸೆಟ್ಟಿಂಗ್ ನಡುವೆ ಶ್ರೀನಿವಾಸನ ಕಲ್ಯಾಣ ಕಾರ್ಯವನ್ನು ಸ್ವಯಂಸೇವಕರು ಮತ್ತು ವಿದ್ವಾಂಸರು, ಸುಮಂಗಲಿಯರ ಒಡಗೂಡಿ ನೆರವೇರಿಸಿದ್ದು ಭಕ್ತಿ ಭಾವದ ಪ್ರತೀಕವಾಗಿತ್ತು.ಕಲ್ಯಾಣೋತ್ಸವದಲ್ಲಿ ಶ್ರೀ ನಿವಾಸನು ಪದ್ಮಾವತಿ ದೇವಿಗೆ ಮಾಂಗಲ್ಯ ಧಾರಣೆ ಮಾಡಿದಾಗ ಮಂಗಳ ವಾದ್ಯಗಳನ್ನು ಮೊಳಗಿಸಲಾಯಿತು.
ಸಮಾರೋಪ ಸಂದರ್ಭದಲ್ಲಿ ಹಾಜರಿದ್ದ ಎಲ್ಲ ಭಕ್ತರಿಗೂ ಶ್ರೀನಿವಾಸನ ಮಂತ್ರಾಕ್ಷತೆ ಸಹಿತ ಪ್ರಸಾದವನ್ನು ವಿತರಣೆ ಮಾಡಲಾಯಿತು. ಸೋಸಲೆ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಈ ವೇಳೆ ಸೊಸಲೆ ಶ್ರೀ ವ್ಯಾಸರಾಜರ ಮಠದ ಪೀಠಾಧಿಪತಿ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಅವರು ಸಮಾರೋಪ ಆಶೀರ್ವಚನವನ್ನು ನೀಡಿ, ವಿದ್ವತ್ ಪ್ರಪಂಚಕ್ಕೆ ನಾಲ್ವರು ಯುವ ಮತ್ತು ನವ ಪಂಡಿತರನ್ನು ಕೊಡುಗೆಯಾಗಿ ನೀಡಿದ ಈ ಸುಧಾಮಂಗಳ ಮಹೋತ್ಸವ ಸಂಪೂರ್ಣವಾಗಿ ಯಶಸ್ವಿಯಾಗಿದೆ . ಇಂದಿನ ಯುವಕರು ಧರ್ಮ ಮತ್ತು ಸಂಸ್ಕೃತಿಯನ್ನು ಪಾಲಿಸಿಕೊಂಡು ಅಖಂಡ ಭಾರತದ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿ ಆಗಬೇಕು ಎಂದು ಆಶಿಸುತ್ತೇವೆ ಎಂದರು.
ವ್ಯಾಸರಾಜರ ಮಠವು ಸದಾ ಕಾಲ ಸನಾತನ ಧರ್ಮದ ಪಾಲನೆಗೆ ಮತ್ತು ಪರಂಪರೆಯ ರಕ್ಷಣೆಗೆ ಬದ್ಧವಾಗಿದೆ. ಮುಂಬರುವ ವರ್ಷಗಳಲ್ಲಿ ಇಂತಹ ಸುಧಾಮಂಗಳ ಸಮ್ಮೇಳನಗಳನ್ನು ಪ್ರತಿವರ್ಷವೂ ಆ ಯೋಜನೆ ಮಾಡಲು ಸಂಕಲ್ಪ ಮಾಡಲಾಗಿದೆ . ಶ್ರೀ ಹರಿವಾಯು ಗುರುಗಳು ಮತ್ತು ಶ್ರೀ ವ್ಯಾಸರಾಜರು ಈ ಕಾರ್ಯವನ್ನು ಸುಗಮವಾಗಿ ನಡೆಸಲಿ ಎಂದು ಪ್ರಾರ್ಥಿಸುತ್ತಿದ್ದೇನೆ ಎಂದು ಅವರು ಹೇಳಿದರು.
ನಾಡಿಗೆ ಸೂಕ್ತ ಕಾಲದಲ್ಲಿ ಮಳೆ ಮತ್ತು ಬೆಳೆಗಳು ಲಭಿಸಲಿ. ಸಮಸ್ತ ಮಾನವ ಕೋಟಿ ಸುಖ ಮತ್ತು ಶಾಂತಿಯಿಂದ ಜೀವಿಸಲಿ. ಎಲ್ಲರಲ್ಲಿಯೂ ಸದಾಚಾರ ಸದ್ವಿಚಾರ ಮತ್ತು ಸನ್ನಡತೆಗಳು ವಿಜೃಂಭಿಸಲಿ, ಆ ಮೂಲಕ ಭಾರತ ವಿಶ್ವಗುರುವಾಗಿ ಮೆರೆಯಲಿ. ಇದಕ್ಕೆ ನಮ್ಮ ನಾಡಿನ ಮಠ ಮತ್ತು ಪೀಠಗಳು ಸದಾ ಸ್ಪಂದಿಸುತ್ತವೆ ಎಂದು ಸೋಸಲೆ ಶ್ರೀಗಳು ನುಡಿದರು.
ಸುಧಾ ಮಂಗಳ ಮಹೋತ್ಸವ ಸಮಾರೋಪದಲ್ಲಿ ವಿಜಯನಗರ ಸಾಮ್ರಾಜ್ಯದ ಪರಂಪರೆಯ ದರ್ಬಾರ್ ನಲ್ಲಿ ವಿರಾಜಮಾನರಾದ ಸೋಸಲೆ ಶ್ರೀ ವಿದ್ಯಾಶ್ರೀಶ ತೀರ್ಥರಿಗೆ ತುಲಾಭಾರ ಸಮರ್ಪಣೆ ನೆರವೇರಿತು.